ಶಿವಮೊಗ್ಗ : ಸ್ವಪಕ್ಷ  ನಾಯಕರ ವಿರುದ್ದ ವಾಗ್ದಾಳಿ, ಶೋಕಾಸ್​ ನೋಟಿಸ್​ ಕುರಿತಾಗಿ ಹೆಚ್​​ ಎಸ್​ ಸುಂದರೇಶ್​​ ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
ಹೆಚ್__ ಎಸ್_ ಸುಂದರೇಶ್__
ಹೆಚ್__ ಎಸ್_ ಸುಂದರೇಶ್__

ಮಲೆನಾಡು ಟುಡೇ ಸುದ್ದಿ, ಶಿವಮೊಗ್ಗ: ಶಿವಮೊಗ್ಗದಲ್ಲಿ ಇತ್ತೀಚೆಗೆ ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಸೂಡಾ ಅಧ್ಯಕ್ಷ ಎಚ್. ಎಸ್. ಸುಂದರೇಶ್ ಅವರ ನಡೆ ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿತ್ತು. ಸುಂದರೇಶ್ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಾರಾ ಅಥವಾ ಬೇರೆ ಪಕ್ಷ ಸೇರುತ್ತಾರಾ ಎಂಬ ಚರ್ಚೆಗಳ ನಡುವೆ, ಅವರ ಅನಾರೋಗ್ಯದ ವಿಚಾರವೂ ಮುನ್ನೆಲೆಗೆ ಬಂದಿತ್ತು. ಈ ಎಲ್ಲಾ ಚರ್ಚೆಗಳಿಗೆ ಇದೀಗ ಮತ್ತೊಂದು ಪತ್ರಿಕಾಗೋಷ್ಠಿಯ ಮೂಲಕ ಎಚ್. ಎಸ್. ಸುಂದರೇಶ್ ಸಮಜಾಯಿಷಿ ನೀಡಿದ್ದಾರೆ.

ಇಂದು ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅನೇಕ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಕೆಪಿಸಿಸಿಯಿಂದ ಬಂದಿರುವ ಶೋಕಾಸ್ ನೋಟಿಸ್‌ಗೆ ಬುಧವಾರ ಉತ್ತರ ನೀಡುತ್ತೇನೆ. ಅವರು ಏನೇನು ಕೇಳಿದ್ದಾರೋ ಅದಕ್ಕೆ ಸಮಜಾಯಿಷಿ ನೀಡಲಿದ್ದು, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಹಾಗೂ ಮಂಜುನಾಥ್ ಭಂಡಾರಿ ಅವರ ಕುರಿತು ಏಕವಚನದಲ್ಲಿ ಮಾತನಾಡಿರುವುದು ತಪ್ಪಾಗಿದೆ. ಅವರೆಲ್ಲರೂ ಹಿರಿಯರು ಹಾಗೂ ರಾಜಕೀಯದಲ್ಲಿ ಉತ್ತಮ ಹೆಸರಿರುವವರು, ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಸಚಿವ ಮಧು ಬಂಗಾರಪ್ಪ ಅವರ ಕುರಿತು ಮಾತನಾಡುವ ಸಂದರ್ಭದಲ್ಲಿಯೂ ಏಕವಚನ ಬಳಕೆಯಾಗಿರುವುದು ತಪ್ಪಾಗಿದೆ; ಅವರಿಗೆ ನೀಡಬೇಕಾದ ಗೌರವದ ವಿಚಾರದಲ್ಲಿ ನಾನು ಬದ್ಧನಾಗಿದ್ದೇನೆ. ಆದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್. ಸಿ. ಯೋಗೇಶ್ ಕುರಿತಾಗಿ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಈಗಲೂ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸೋಮವಾರ ತೀರ್ಥಹಳ್ಳಿಗೆ ತೆರಳಲಿರುವ ಸುಂದರೇಶ್

ತಮ್ಮ ವಿರುದ್ಧ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿಗೆ ತೆರಳುವುದಾಗಿ ಸುಂದರೇಶ್ ಹೇಳಿದರು. ಯಾರಾದರೂ ಬರುವುದಿದ್ದರೆ ಬರಲಿ, ಅವರ ಪ್ರಶ್ನೆಗಳಿಗೆ ವೇದಿಕೆಯಲ್ಲೇ ಉತ್ತರ ನೀಡುತ್ತೇನೆ ಎಂದರು. ತೀರ್ಥಹಳ್ಳಿಗೆ ತೆರಳುತ್ತಿರುವುದು ನಿಮ್ಮ ವಿರುದ್ಧ ಹಾಕಲಾಗಿರುವ ಸವಾಲಿಗೆ ನೀಡುತ್ತಿರುವ ಉತ್ತರವೇ ಎಂಬ ಪ್ರಶ್ನೆಗೆ, ಅಲ್ಲಿ ಸಭೆ ನಡೆಯಲಿದ್ದು, ಆದ್ದರಿಂದ ನಾನು ತೆರಳುತ್ತಿದ್ದೇನೆ ಎಂದು ತಿಳಿಸಿದರು.

ಸಂಗಮೇಶ್ ಹಾಗೂ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ತಮ್ಮ ಹಿಂದಿನ ಬೇಡಿಕೆಗೆ ಈಗಲೂ ಬದ್ಧನಾಗಿರುವುದಾಗಿ ಸುಂದರೇಶ್ ಹೇಳಿದರು. ಬೇಳೂರು ಗೋಪಾಲಕೃಷ್ಣ ಅವರಿಗೆ ಉತ್ತರ ಕನ್ನಡ (ಕಾರವಾರ) ಜಿಲ್ಲಾ ಉಸ್ತುವಾರಿ ಹಾಗೂ ಸಂಗಮೇಶ್ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಬೇಕು ಎಂಬ ಬೇಡಿಕೆಯನ್ನೂ ಅವರು ಪುನರುಚ್ಚರಿಸಿದರು.

ಇದೇ ವೇಳೆ, ಪಕ್ಷದಲ್ಲಿ ಅನೇಕ ಗೊಂದಲಕಾರರಿದ್ದಾರೆ. ಅವರನ್ನೆಲ್ಲ ಪಕ್ಷದಿಂದ ಹೊರಹಾಕಿದಾಗ ಮಾತ್ರ ಪಕ್ಷ ಶುದ್ಧಿಯಾಗಲು ಸಾಧ್ಯ, ಸೂಡಾದಲ್ಲಿ ಕಾರ್ಯಕ್ರಮವೊಂದಿದೆ ಆ ಕಾರ್ಯಕ್ರಮ ಮುಗಿದ ಮೇಲೆ ನಾನು ರಾಜೀನಾಮೆ ನೀಡುತ್ತೇನೆ, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಾನು ನಿರ್ವಹಿಸುತ್ತೇನೆ ಎಂದರು, 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor