ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕರ್ನಾಟಕ ಹಾಲು ಮಹಾಮಂಡಳ ಹಾಗೂ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸೆ.20ರಂದು ಮೊದಲ ಬಾರಿಗೆ ‘ನಂದಿನಿ ಮ್ಯಾರಥಾನ್–2026’ ಆಯೋಜಿಸಲಾಗಿದೆ. ‘ನಂದಿನಿಗಾಗಿ ಓಟ’ ಎಂಬ ಘೋಷವಾಕ್ಯದಡಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗೆ ಮ್ಯಾರಥಾನ್ ನಡೆಯಲಿದೆ ಎಂದು ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್ ತಿಳಿಸಿದ್ದಾರೆ.
ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರಿಗೆ 3 ಕಿ.ಮೀ., ಪುರುಷರು ಹಾಗೂ ಮಹಿಳೆಯರಿಗೆ 10 ಕಿ.ಮೀ. ಓಟ ಆಯೋಜಿಸಲಾಗಿದೆ. 45 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೂ ಪ್ರತ್ಯೇಕ ವಿಭಾಗದಲ್ಲಿ ಮ್ಯಾರಥಾನ್ ನಡೆಯಲಿದೆ. ಎಲ್ಲ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಲಾಗುವುದು.
ಮ್ಯಾರಥಾನ್‌ಗೆ ಮೊದಲು ನೋಂದಾಯಿಸಿಕೊಳ್ಳುವ 2 ಸಾವಿರ ಸ್ಪರ್ಧಿಗಳಿಗೆ ಉಚಿತವಾಗಿ ಟಿ ಶರ್ಟ್, ಕ್ಯಾಪ್ ಹಾಗೂ ನಂದಿನಿ ಕಿಟ್ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧಿಗಳಿಗಾಗಿ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6360456043, 9980011184, 8892325558 ಹಾಗೂ 8660461910 ಸಂಪರ್ಕಿಸಬಹುದು.
57 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಮ್ಯಾರಥಾನ್‌ಗೂ ಮುನ್ನ ಶಿಮುಲ್ ವ್ಯಾಪ್ತಿಯ 19 ತಾಲ್ಲೂಕುಗಳಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ 57 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಎಚ್.ಎನ್. ವಿದ್ಯಾಧರ್ ತಿಳಿಸಿದ್ದಾರೆ.
