ಶಿವಮೊಗ್ಗ : ಶಾಸಕ ಚೆನ್ನಿ ಹೇಳಿಕೆಗೆ ಈಶ್ವರಪ್ಪ ಕೊಟ್ಟ ಪ್ರತಿಕ್ರಿಯೆ ಏನು ?

ಹಂಚಿಕೊಳ್ಳಿ
WhatsApp Facebook X Telegram
Eshwarappa Reacts to Channabasappa's Attack
Eshwarappa Reacts to Channabasappa's Attack

ಶಿವಮೊಗ್ಗ: 2028ರ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇರುವಾಗಲೇ ಶಿವಮೊಗ್ಗದಲ್ಲಿ ಗುರು-ಶಿಷ್ಯರ ನಡುವೆ ಕೋಲ್ಡ್ ವಾರ್ ಆರಂಭವಾದಂತಿದೆ. ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪನವರು ರಾಷ್ಟ್ರಭಕ್ತ ಬಳಗದಿಂದ ನಾನು ಅಥವಾ ನನ್ನ ಮಗ ಕೆ. ಇ. ಕಾಂತೇಶ್ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ಇದರ ವಿರುದ್ಧ ಶಾಸಕ ಎಸ್. ಎನ್. ಚನ್ನಬಸಪ್ಪ ನಿನ್ನೆ ಸಿಡಿದೆದ್ದಿದ್ದರು. ಶಿಷ್ಯನ ಈ ಹೇಳಿಕೆಗೆ ಕೆ. ಎಸ್. ಈಶ್ವರಪ್ಪ ಇಂದು ಪ್ರತಿಕ್ರಿಯೆ ನೀಡಿದ್ದು, ಈ ಇಡೀ ಪ್ರಸಂಗದ ಸಂಪೂರ್ಣ ವಿವರ ಇಲ್ಲಿದೆ.

ಎಸ್. ಎನ್. ಚನ್ನಬಸಪ್ಪ ಅವರು ಕೆ. ಎಸ್. ಈಶ್ವರಪ್ಪನವರ ಶಿಷ್ಯ. ಒಂದು ಕಾಲದಲ್ಲಿ ಅಧಿವೇಶನದಲ್ಲಿ ಈಶ್ವರಪ್ಪನವರನ್ನು ದೇಶದ್ರೋಹಿ ಎಂದು ಕರೆದ ಹಿನ್ನೆಲೆಯಲ್ಲಿ ರಾಷ್ಟ್ರಭಕ್ತ ಬಳಗ ಆರಂಭವಾಯಿತು. ಆದರೆ, ಉತ್ತಮ ಉದ್ದೇಶದಿಂದ ಸ್ಥಾಪಿಸಿದ ರಾಷ್ಟ್ರಭಕ್ತ ಬಳಗವನ್ನು ರಾಜಕೀಯವಾಗಿ ಬಳಸಿಕೊಂಡು, ಬಿಜೆಪಿಯ ವಿರುದ್ಧವೇ ರಾಷ್ಟ್ರಭಕ್ತರ ಹೆಸರಿನಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಚನ್ನಬಸಪ್ಪ ಆಕ್ರೋಶ ಹೊರಹಾಕಿದ್ದರು.

ಈ ಕುರಿತು ನಿನ್ನೆ ಪ್ರತಿಕ್ರಿಯಿಸಿದ್ದ ಚನ್ನಬಸಪ್ಪ, ನಾವೆಲ್ಲರೂ ಈ ಹಿಂದೆ ರಾಷ್ಟ್ರಭಕ್ತ ಬಳಗದ ಹೆಸರಿನಲ್ಲಿ ಒಟ್ಟಾಗಿ ದೇಶ ಕಟ್ಟುವ ಮತ್ತು ಹಿಂದುತ್ವದ ಪರವಾಗಿ ಹೋರಾಟ ಮಾಡಿದ್ದೇವೆ. ಆದರೆ, ಈಗ ಅದೇ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಈಶ್ವರಪ್ಪನವರು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗೆ ನಿಂತಿರುವುದು ತೀವ್ರ ಬೇಸರ ತಂದಿದೆ. ಅವರಿಂದ ಈ ರೀತಿಯ ನಡೆ ಹಾಗೂ ಹೇಳಿಕೆಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಅವರು ಹಿಂದುತ್ವ ಮತ್ತು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಭಾವಿಸಿದ್ದ ನಮಗೆ, ಈಗ ಅವರ ನೈಜ ಉದ್ದೇಶ ಏನೆಂಬುದು ತಿಳಿಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ತಾವಾಗಲಿ ಅಥವಾ ತಮ್ಮ ಮಗನಾಗಲಿ ಸ್ಪರ್ಧಿಸುವುದು ಖಚಿತ ಎಂದು ಈಶ್ವರಪ್ಪ ಘೋಷಿಸಿರುವುದಕ್ಕೆ ತಿರುಗೇಟು ನೀಡಿದ ಚನ್ನಬಸಪ್ಪ, ಒಂದೆಡೆ ಬಿಜೆಪಿ ಪಕ್ಷಕ್ಕೆ ಮರಳುವುದಾಗಿ ಹೇಳುವ ಈಶ್ವರಪ್ಪ, ಇನ್ನೊಂದೆಡೆ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುವ ಮೂಲಕ ಅದರ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಕಾಂಗ್ರೆಸ್‌ಗೇ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ, ಇನ್ನು ಇವರಿಂದ ಅದು ಸಾಧ್ಯವೇ? ಪಾರ್ಟಿಗೆ ಬುದ್ಧಿ ಕಲಿಸುತ್ತೇನೆ ಎಂಬ ಭ್ರಮೆಯಲ್ಲಿದ್ದರೆ ಅದು ಅವರ ದೊಡ್ಡ ತಪ್ಪು ಎಂದು ಸವಾಲು ಹಾಕಿದರು.

ನಮ್ಮದು ಸಿದ್ಧಾಂತ ಮತ್ತು ನಿಷ್ಠಾವಂತ ಕಾರ್ಯಕರ್ತರ ಅಡಿಪಾಯದ ಮೇಲೆ ನಿಂತಿರುವ ಪಕ್ಷ. ವೈಚಾರಿಕ ನೆಲೆಗಟ್ಟನ್ನು ಧ್ವಂಸ ಮಾಡುವ ಈಶ್ವರಪ್ಪ ಅವರ ಪ್ರಯತ್ನ ಎಂದಿಗೂ ಈಡೇರುವುದಿಲ್ಲ. ಹರಿ, ಹರ, ಬ್ರಹ್ಮನೇ ಬಂದರೂ ಬಿಜೆಪಿ ಕಾರ್ಯಕರ್ತರು ಇಂತಹ ಸವಾಲುಗಳನ್ನು ದಿಟ್ಟವಾಗಿ ಎದುರಿಸಲಿದ್ದಾರೆ. ನಾವು ಅವರನ್ನು ಗೌರವದಿಂದ ಪಕ್ಷಕ್ಕೆ ಮರಳಿ ಬರಲೆಂದು ಎದುರು ನೋಡುತ್ತಿದ್ದ ಸಂದರ್ಭದಲ್ಲೇ, ಅವರು ಈ ರೀತಿ ಅಚ್ಚರಿಯ ಹೇಳಿಕೆ ನೀಡುತ್ತಿದ್ದು, ಇದನ್ನು ನಾವು ರಾಜಕೀಯವಾಗಿಯೇ ಮೆಟ್ಟಿ ನಿಲ್ಲಲಿದ್ದೇವೆ ಎಂದಿದ್ದರು.

ಚನ್ನಬಸಪ್ಪ ಅವರ ಈ ಹೇಳಿಕೆಗೆ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಬಹುದು, ಇದರಿಂದ ಜಿಲ್ಲಾ ರಾಜಕಾರಣದಲ್ಲಿ ಗುರು-ಶಿಷ್ಯರ ನಡುವೆ ತೀವ್ರ ಪೈಪೋಟಿ ಎದುರಾಗಬಹುದು ಎಂದೇ ಎಲ್ಲರೂ ಊಹಿಸಿದ್ದರು. ಆದರೆ, ಆ ಎಲ್ಲಾ ಊಹೆಗಳು ತಲೆಕೆಳಗಾದವು. ಈ ಕುರಿತು ಮಾತನಾಡಿದ ಈಶ್ವರಪ್ಪ, ನಾವು ರಾಷ್ಟ್ರಭಕ್ತ ಬಳಗದ ವತಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದೇವೆ ಮತ್ತು ಈ ಕುರಿತು ಹಿರಿಯರೊಂದಿಗೂ ಚರ್ಚಿಸಿದ್ದೇವೆ. ಚೆನ್ನಿ ಸೀರಿಯಸ್ ಆಗಿ ಹೇಳಿರಬಹುದು, ಅದನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಆತ ನಮ್ಮ ಹುಡುಗ, ಈಗ ತಾನೇ ರಾಜಕೀಯದಲ್ಲಿ ಬೆಳೆಯುತ್ತಿದ್ದಾನೆ. ಮುಂದೆ ಏನೇನಾಗುತ್ತೋ ನೋಡೋಣ ಎಂದು ಶಾಂತವಾಗಿಯೇ ಪ್ರತಿಕ್ರಿಯಿಸಿದರು.

ಇನ್ನು ಚೆನ್ನಿಯ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತ್ರ ಮಾತನಾಡುತ್ತೇನೆ ಎಂದು ಹೇಳಿದ ಈಶ್ವರಪ್ಪ, ತಮ್ಮ ಮುಂದಿನ ನಡೆ ಬಗ್ಗೆ ಹೀಗೆ ಸ್ಪಷ್ಟನೆ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ರಾಷ್ಟ್ರಭಕ್ತ ಬಳಗದ ವತಿಯಿಂದ ಸ್ಪರ್ಧಿಸುವುದು ಖಚಿತ. ಹಿಂದುತ್ವದ ಉಳಿವಿಗಾಗಿ ರಾಷ್ಟ್ರಭಕ್ತ ಬಳಗದಿಂದ ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಈಗಾಗಲೇ ಬಿಜೆಪಿಯ ಹಿರಿಯ ನಾಯಕರು ನಮ್ಮೊಂದಿಗೆ ಚರ್ಚಿಸಿದ್ದಾರೆ. ಚುನಾವಣೆಗೆ ಈ ಬಾರಿ ಸ್ಪರ್ಧಿಸುವುದಾಗಿ ನನ್ನ ಮಗ ಸ್ಪಷ್ಟವಾಗಿ ಹೇಳಿದ್ದಾನೆ. ನಮ್ಮ ತಂದೆ ಇಡೀ ರಾಜ್ಯದಲ್ಲಿ ಸುತ್ತಾಡಿ ಸಂಘಟನೆ ಮಾಡಬೇಕು ಎಂದಿದ್ದಾನೆ. ಬಿಜೆಪಿ ಹೀಗೆಯೇ ಮುಂದುವರಿದರೆ ಕಷ್ಟವಾಗುತ್ತದೆ ಎಂಬ ವಿಷಯವನ್ನು ಅವರ ಗಮನಕ್ಕೆ ತಂದಿದ್ದಾನೆ. ಈ ಎರಡು ವಿಚಾರಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಇನ್ನೆರಡು ತಿಂಗಳೊಳಗೆ ಕೇಂದ್ರ ನಾಯಕರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದಾಗಿ ನಾಯಕರು ಒಪ್ಪಿಕೊಂಡಿದ್ದಾರೆ. ಚುನಾವಣೆವರೆಗೂ ಈ ಸರ್ಕಾರವನ್ನು ಮತ್ತು ಈ ಪಕ್ಷವನ್ನು ಈ ರೀತಿ ನಡೆಯಲು ನಾವು ಬಿಡುವುದಿಲ್ಲ. ಬಿಜೆಪಿ ಸಂಘಟನೆಯಾಗಿರುವುದು ಒಂದು ಅಥವಾ ಎರಡು ದಿನದ ವಿಚಾರವಲ್ಲ. ನಾವೆಲ್ಲರೂ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನವನ್ನು ನೆನಪು ಮಾಡಿಕೊಳ್ಳುತ್ತೇವೆ, ಪಂಡಿತ್ ದೀನದಯಾಳರ ತ್ಯಾಗವನ್ನು ನೆನಪು ಮಾಡಿಕೊಳ್ಳುತ್ತೇವೆ. ಅವರೆಲ್ಲರೂ ಪ್ರಾಣ ಕೊಟ್ಟಿರುವುದು ಇವರು ಲೂಟಿ ಹೊಡೆದುಕೊಂಡು ಹೋಗುವುದಕ್ಕಲ್ಲ. ನಾವು ಸಂಘಟನೆಯನ್ನು ಗಟ್ಟಿ ಮಾಡುತ್ತೇವೆ ಮತ್ತು ಮುಂಬರುವ ಚುನಾವಣೆಯಲ್ಲೂ ಸ್ಪರ್ಧಿಸುತ್ತೇವೆ ಎಂದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor