ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಸೆಪ್ಟಂಬರ್06ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ CAR/DAR ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಯು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ CAR/DAR ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಅದಕ್ಕಾಗಿ 01 ಇಂಜಿನಿಯರಿಂಗ್ ಕಾಲೇಜು, 03 ಡಿಗ್ರಿ, 02 ಹೈಸ್ಕೂಲ್ಗಳು ಮತ್ತು 13 ಪದವಿ ಪೂರ್ವ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಈ ಪರೀಕ್ಷೆಗೆ 7651 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದರು.
ಸೆಪ್ಟಂಬರ್06ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗಿನ ಅಧಿವೇಶನದಲ್ಲಿ 100ಅಂಕಗಳಿಗೆ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ಒಳಗೊಂಡ ಸಾಮಾನ್ಯ ಅಧ್ಯಯನ ವಿಷಯಗಳ ಮೇಲೆ ಪರೀಕ್ಷೆ ನಡೆಯಲಿದೆ ಎಂದರು.
ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 06 ವಿತರಕ ಮಾರ್ಗಗಳನ್ನು ಸೃಜಿಸಲಾಗಿದೆ. ಅದಕ್ಕಾಗಿ ತ್ರಿಸದಸ್ಯ ಸಮಿತಿ ನೇಮಿಸಿ ಆದೇಶಿಸಲಾಗಿದೆ. ಮುಖ್ಯ ಅಧೀಕ್ಷಕ ವೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಮತ್ತು ಜಾಗೃತದಳದ ಸದಸ್ಯರ ನೇಮಕಗೊಳಿಸಿ ಆದೇಶಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ತ್ರಿಸದಸ್ಯ ಸಮಿತಿ ವಾಹನಕ್ಕೆ ಪೋಲಿಸ್ ಸಿಬ್ಬಂದಿ ನೇಮಿಸುವಂತೆ ಹಾಗೂ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ನೀಡುವಂತೆಯೂ ಸೂಚಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿಧ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಅಭಿಯಂತರರಿಗೆ ಸೂಚಿಸಲಾಗಿದೆ ಎಂದರು.
ನಿಯಮಾನುಸಾರ ಪರೀಕ್ಷಾರ್ಥಿಗಳು ನಿಗಧಿತ ಸಮಯಕ್ಕೆ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಸ್ವತಃ ಸ್ವಯಂ ತಪಾಸಣೆಗೆ ಒಳಪಡಿಸಿಕೊಂಡು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಪಡೆದುಕೊಳ್ಳಬೇಕು. HALL TICKET SCAN ಮಾಡಿ FACE RCEOGNATION ಪರಿಶೀಲಿಸಿ ಕೊಠಡಿಯೊಳಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ. ಪೋಲಿಸ್ ಇಲಾಖೆಯಿಂದಲೇ ವೆಬ್ ಕ್ಯಾಸ್ಟಿಂಗ್, ಮತ್ತು ಡ್ರೆಸ್ ಕೋಡ್ ಪರಿಶೀಲಿಸಿ ಕೊಠಡಿಯೊಳಗೆ ಬಿಡಲು ವ್ಯವಸ್ಥೆ ಮಾಡಿದೆ ಎಂದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ಪ್ರದೇಶದ ವ್ಯಾಪ್ತಿಯಲ್ಲಿ ಬಿ.ಎನ್.ಎಸ್ ಸೆಕ್ಷನ್ 163 ಜಾರಿಗೊಳಿಸಿ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಜನರು ಗುಂಪುಗೂಡುವುದನ್ನು, ಅನಗತ್ಯವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸುವುದನ್ನು ಹಾಗೂ ಸಭೆ, ಸಮಾರಂಭ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೇ ಅಲ್ಲಿನ ಕಂಫ್ಯೂಟರ್, ಝೆರಾಕ್ಸ್ಅಂಗಡಿಗಳನ್ನು ಮುಚ್ಚುವಂತೆಯೂ ಸೂಚಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರದ ಒಳಗೆ ಪರೀಕ್ಷಾರ್ಥಿಗಳು ಈ ಕೆಳಗಿನ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ.
1 ಎಲೆಕ್ಟ್ರಾನಿಕ್ಸ್ ವಸ್ತುಗಳು : ಮೊಬೈಲ್ ಫೋನ್, ಬ್ಲೂಟೂತ್, ಇಯರ್ಫೋನ್ಗಳು, ಮೈಕ್ರೋಫೋನ್, ಪೇಜರ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಪೆನ್ ಡ್ರೈವ್ಗಳು, ಎಲೆಕ್ಟ್ರಾನಿಕ್ ಪೆನ್/ಸ್ಕ್ಯಾನರ್, ಕೈ ಗಡಿಯಾರ, ಸ್ಮಾರ್ಟ್ , ಸ್ಮಾರ್ಟ್ ವಾಚ್, ಆಧುನಿಕ ಸಂವಹನ ಸಾಧನಗಳು, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು.
2 ಆಹಾರ ಮತ್ತು ಪಾನೀಯಗಳು : ತೆರೆದಿರುವ ಅಥವಾ ಸೀಲ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು, ನೀರಿನ ಬಾಟಲ್, ಪಾನೀಯ ಬಾಟಲ್ಗಳು
3 ಪಠ್ಯ ಸಾಮಗ್ರಿಗಳು : ಬರೆದಿಟ್ಟುಕೊಂಡಿರುವ ಅಥವಾ ಪ್ರಿಂಟ್ ಇರುವ ಚೀಟಿಗಳು, ಪುಸ್ತಕಗಳು, ಜಾಮಿಟ್ರಿ ಬಾಕ್ಸ್ / ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸೇಲ್, ಬರೆಯುವ ಪೇಪರ್, ಎರೇಸರ್, ಲಾಗ್ ಟೇಬಲ್ ಇತ್ಯಾದಿ ಬರಹಗಳಿರುವ ವಸ್ತುಗಳು.
4 ಶೂ ಗಳು / ಬೂಟ್ಸ್, ಕ್ಯಾಪ್, ಕಿವಿ / ತಲೆ ಮತ್ತು ಮುಖ ಮುಚ್ಚುವಂತಹ ಯಾವುದೇ ಉಡುಪುಗಳು, ಬ್ಯಾಗ್, ಪರ್ಸು, ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟುಗಳು. ಹಾಕುವಂತಿಲ್ಲ
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತು ಶುದ್ಧ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಲು ಹಾಗೂ ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ, ಕ್ಯಾಮರಾ ಕಣ್ಗಾವಲು ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ವರಿಷ್ಟಾಧಿಕಾರಿ ಬಿ.ನಿಖಿಲ್.ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ., ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಉಪನ್ಯಾಸಕ ಐ.ಎಫ್.ಕುಟ್ರಿ. ಜಿಲ್ಲಾ ಖಜಾನಾಧಿಕಾರಿ ಹೆಚ್.ಎಸ್.ಸಾವಿತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ದದ ಅಧಿಕಾರಿಗಳು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
