ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ರಾಷ್ಟ್ರಭಕ್ತರ ಹೆಸರಿನಲ್ಲಿ ಈಶ್ವರಪ್ಪ ಅವರು ಸ್ವಾರ್ಥ ರಾಜಕೀಯ ಮಾಡಲು ಹೊರಟಿದ್ದಾರೆ, ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾವೆಲ್ಲರೂ ಈ ಹಿಂದೆ ರಾಷ್ಟ್ರಭಕ್ತರ ಬಳಗದ ಹೆಸರಿನಲ್ಲಿ ಒಟ್ಟಾಗಿ ದೇಶ ಕಟ್ಟುವ ಮತ್ತು ಹಿಂದುತ್ವದ ಪರವಾಗಿ ಹೋರಾಟ ಮಾಡಿದ್ದೇವೆ. ಆದರೆ, ಈಗ ಅದೇ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಈಶ್ವರಪ್ಪ ರಾಜಕೀಯ ಸ್ವಾರ್ಥ ಸಾಧನೆಗೆ ನಿಂತಿರುವುದು ತೀವ್ರ ಬೇಸರ ತಂದಿದೆ. ಅವರಿಂದ ಈ ರೀತಿಯ ಹೇಳಿಕೆ ಹಾಗೂ ನಡೆಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ. ಅವರು ಹಿಂದುತ್ವ ಮತ್ತು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಭಾವಿಸಿದ್ದ ನಮಗೆ ಈಗ ಅವರ ನೈಜ ಉದ್ದೇಶ ತಿಳಿದಿದೆ, ಎಂದು ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ತಾವಾಗಲಿ ಅಥವಾ ತಮ್ಮ ಮಗನಾಗಲಿ ಸ್ಪರ್ಧಿಸುವುದು ಖಚಿತ ಎಂದು ಈಶ್ವರಪ್ಪ ಘೋಷಿಸಿರುವುದಕ್ಕೆ ತಿರುಗೇಟು ನೀಡಿದ ಚನ್ನಬಸಪ್ಪ, ಒಂದೆಡೆ ಬಿಜೆಪಿ ಪಕ್ಷಕ್ಕೆ ಮರಳುವುದಾಗಿ ಹೇಳುವ ಈಶ್ವರಪ್ಪ, ಇನ್ನೊಂದೆಡೆ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಕಾಂಗ್ರೆಸ್‌ಗೇ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ, ಇನ್ನು ಇವರಿಂದ ಅದು ಸಾಧ್ಯವೇ? ಪಾರ್ಟಿಗೆ ಬುದ್ಧಿ ಕಲಿಸುತ್ತೇನೆ ಎಂಬ ಭ್ರಮೆಯಲ್ಲಿದ್ದರೆ ಅದು ಅವರ ದೊಡ್ಡ ತಪ್ಪು, ಎಂದು ಸವಾಲು ಹಾಕಿದರು.
ನಮ್ಮದು ಸಿದ್ಧಾಂತ ಮತ್ತು ನಿಷ್ಠಾವಂತ ಕಾರ್ಯಕರ್ತರ ಅಡಿಪಾಯದ ಮೇಲೆ ನಿಂತಿರುವ ಪಕ್ಷ. ವೈಚಾರಿಕ ನೆಲೆಗಟ್ಟನ್ನು ಧ್ವಂಸ ಮಾಡುವ ಈಶ್ವರಪ್ಪ ಅವರ ಪ್ರಯತ್ನ ಎಂದಿಗೂ ಈಡೇರುವುದಿಲ್ಲ. ಹರಿ, ಹರ, ಬ್ರಹ್ಮನೇ ಬಂದರೂ ಬಿಜೆಪಿ ಕಾರ್ಯಕರ್ತರು ಇಂತಹ ಸವಾಲುಗಳನ್ನು ದಿಟ್ಟವಾಗಿ ಎದುರಿಸಲಿದ್ದಾರೆ. ನಾವು ಅವರನ್ನು ಗೌರವದಿಂದ ಪಕ್ಷಕ್ಕೆ ಮರಳಿ ಬರಲೆಂದು ಎದುರು ನೋಡುತ್ತಿದ್ದ ಸಂದರ್ಭದಲ್ಲೇ, ಅವರು ಈ ರೀತಿ ಅಚ್ಚರಿಯ ಹೇಳಿಕೆ ನೀಡುತ್ತಿದ್ದು, ಇದನ್ನು ನಾವು ರಾಜಕೀಯವಾಗಿಯೇ ಮೆಟ್ಟಿ ನಿಲ್ಲಲಿದ್ದೇವೆ, ಎಂದು ಶಾಸಕ ಚನ್ನಬಸಪ್ಪ ಸ್ಪಷ್ಟಪಡಿಸಿದರು.
