ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಯತೀಂದ್ರರನ್ನ ಭೇಟಿಯಾದ ಎಸ್​.ಎನ್​.ಚನ್ನಬಸಪ್ಪ ಮತ್ತು ಡಿಎಸ್​ ಅರುಣ್ ನಿಯೋಗ! ಮಾಹಿತಿ ಕುತೂಹಲಕರವಾಗಿದೆ

ಹಂಚಿಕೊಳ್ಳಿ
WhatsApp Facebook X Telegram
SN Channabasappa and DS Arun Delegation Meets Siddaramaiah, Minister Yathindra
SN Channabasappa and DS Arun Delegation Meets Siddaramaiah, Minister Yathindra

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಾಮಾನ್ಯವಾಗಿ ವಿಭಿನ್ನ ಪಕ್ಷಗಳ ರಾಜಕಾರಣಿಗಳ ಭೇಟಿ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಅದರಲ್ಲಿಯು ಕೆಲವೊಮ್ಮೆ ವಿರೋಧಗಳು ಬಹಿರಂಗವಾಗಿ ದೊಡ್ಡ ಸದ್ದುಮಾಡುತ್ತಿದ್ದ ಆಪೋಸಿಶನ್​ ರಾಜಕಾರಣಿಗಳ ಭೇಟಿ ಕುತೂಹಲದ ಜೊತೆಗೆ ಚರ್ಚೆಗೆ ಕಾರಣವಾಗುತ್ತದೆ. ಇಂತಹದ್ದೊಂದು ಭೇಟಿಗೆ ಶಿವಮೊಗ್ಗ ಶಾಸಕರು ಸಾಕ್ಷಿಯಾಗಿದ್ದರಾದರೂ ಸಹ , ಆ ಭೇಟಿಯ ಬಗ್ಗೆ ಅವರೇ ಖುದ್ದು ಸ್ಪಷ್ಟನೆಯನ್ನ ನೀಡಿದ್ದಾರೆ.

ಶಿವಮೊಗ್ಗ ಶಾಸಕ ಎಸ್​ಎನ್​ ಚೆನ್ನಬಸಪ್ಪ ಹಾಗೂ ಡಿಎಸ್​ ಅರುಣ್​ ಹಾಗು ಶಿವಮೊಗ್ಗದ ನಿಯೋಗ ಮಾಜಿ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಹಾಗೂ ಅವರ ಪುತ್ರ ಹಾಗೂ ಸಚಿವ ಯತೀಂದ್ರರವರನ್ನ ಭೇಟಿಮಾಡಿ ಮಾತುಕತೆ ನಡೆಸಿದೆ. ಈ ಬಗ್ಗೆ ಸ್ವತಃ ಚನ್ನಬಸಪ್ಪರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.

ಅವರು ನೀಡಿರುವ ಮಾಹಿತಿಯಂತೆ ಶಿವಮೊಗ್ಗ ನಗರದ ನವುಲೆ ಗ್ರಾಮದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ಗೆ ಮಂಜೂರಾಗಿರುವ ಸಿಎ ನಿವೇಶನದ ಗುತ್ತಿಗೆ ಅವಧಿಯನ್ನು ಮುಂದಿನ 30 ವರ್ಷಗಳಿಗೆ ನವೀಕರಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅಧಿಕೃತ ಮನವಿ ಮಾಡುವ ಸಲುವಾಗಿ ಶಿವಮೊಗ್ಗದ ನಿಯೋಗ ಅಲ್ಲಿಗೆ ತೆರಳಿತ್ತು.

ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಗೆ ಸಿಎ ನಿವೇಶನ ಮಂಜೂರು ಮಾಡಲಾಗಿತ್ತು. ನಿವೇಶನದ 30 ವರ್ಷಗಳ ಲೀಸ್ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಗುತ್ತಿಗೆ ನವೀಕರಿಸಿಕೊಡುವಂತೆ ಸಂಸ್ಥೆಯ ಪ್ರಮುಖರು ಸಚಿವರನ್ನು ಭೇಟಿಯ ವೇಳೆ ಕೋರಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶನದಂತೆ ಸಂಸ್ಥೆಯು ನಿಗದಿತ ಅವಧಿಯೊಳಗೆ ಅಗತ್ಯ ಪರವಾನಗಿ ಪಡೆದುಕೊಂಡಿದೆ. ಮಂಜೂರಾದ ಸಿಎ ನಿವೇಶನದಲ್ಲಿ ನಿಯಮಬದ್ಧವಾಗಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪರಿಷ್ಕೃತ ಗುತ್ತಿಗೆ ಮೊತ್ತ ಪಾವತಿಸಲು ಸಂಸ್ಥೆ ಸಿದ್ಧವಿದೆ. ಹೀಗಿದ್ದರೂ ಇತ್ತೀಚಿನ ಸರ್ಕಾರದ ಆದೇಶವನ್ನು ಆಧರಿಸಿ ನಿವೇಶನದ ಗುತ್ತಿಗೆಯನ್ನು ರದ್ದುಪಡಿಸಲು ಮುಂದಾಗಿರುವುದು ನಿಯಮಬಾಹಿರವಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಆಕ್ಷೇಪಿಸಿದ್ದಾರೆ. ಸಂಸ್ಥೆಯು ನಿಯಮಗಳನ್ನು ಪಾಲಿಸಿ ಕಟ್ಟಡ ನಿರ್ಮಿಸಿರುವುದರ ಜೊತೆಗೆ ನಿವೇಶನವನ್ನು ನಿಗದಿತ ಉದ್ದೇಶಕ್ಕಾಗಿಯೇ ಬಳಸುತ್ತಿದೆ. ಆದ್ದರಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಗುತ್ತಿಗೆಯನ್ನು ಮುಂದುವರಿಸಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ನಿಯಮ 8(1), 10(14)ರ ಅನ್ವಯ ಪ್ರಸ್ತಾವನೆ

ಸಿಎ ನಿವೇಶನದ ಗುತ್ತಿಗೆ ಮುಂದುವರಿಸುವ ವಿಷಯ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿಯೂ ಚರ್ಚೆಯಾಗಿದೆ. ನಿವೇಶನ ಹಂಚಿಕೆ ನಿಯಮ 8(1) ಮತ್ತು 10(14)ರ ಅನ್ವಯ ಗುತ್ತಿಗೆ ನವೀಕರಣಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಗೆ ಮುಂದಿನ 30 ವರ್ಷಗಳ ಅವಧಿಗೆ ಗುತ್ತಿಗೆ ನವೀಕರಿಸಲು ಸರ್ಕಾರ ತಕ್ಷಣ ಪೂರ್ವಾನುಮೋದನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇನ್ನೂ ಈ ವಿಷಯಕ್ಕೆ ಪೂರಕವಾಗಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಮುಂಬರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ವಿಷಯವನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಗುತ್ತಿಗೆ ನವೀಕರಣಕ್ಕೆ ಅನುಮೋದನೆ ನೀಡುವ ಕುರಿತು ಸಂಬಂಧಿಸಿದ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಎಂಎಲ್​ಸಿ ಡಿಎಸ್​ ಅರುಣ್ ಹಾಗೂ ಶಾಸಕ ಎಸ್​ಎನ್​ ಚನ್ನಬಸಪ್ಪರವರು ಮಾಜಿ ಸಿಎಂ ಸಿದ್ದರಾಮಯ್ಯರವರನ್ನ ಸಹ ಭೇಟಿಯಾಗಿ ಕೆಲವು ಹೊತ್ತು ಮಾತುಕತೆಯನ್ನು ನಡೆಸಿದರು. ಸಚಿವರ ಭೇಟಿಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹಾಗೂ ಸೊಸೈಟಿಯ ನಿರ್ದೇಶಕ ದೀನ್ ದಯಾಳ್, ನಿರ್ದೇಶಕರಾದ ಸೂರ್ಯನಾರಾಯಣ, ಮಾಧವ್ ಮೂರ್ತಿ, ಡಾ. ರವಿಕಿರಣ್, ಮಣಿ, ಶಶಿಕಾಂತ್ ಸೇರಿದಂತೆ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor