ಮಲೆನಾಡು ಟುಡೆ ನ್ಯೂಸ್ / ತೀರ್ಥಹಳ್ಳಿ / 02 : ಮಲೆನಾಡಿನ ಜನರ ಮೂಲಭೂತ ಹಕ್ಕು ಹಾಗೂ ಜನಜೀವನಕ್ಕೆ ಕಂಠಕವಾಗಲಿರುವ ಕಸ್ತೂರಿ ರಂಗನ್ ವರದಿಯನ್ನು ಒಕ್ಕೊರಲಿನಿಂದ ವಿರೋಧಿಸಲು ಸೆಪ್ಟೆಂಬರ್ 3ರಂದು ಮಧ್ಯಾಹ್ನ 3 ಗಂಟೆಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪಕ್ಷಾತೀತವಾಗಿ ಬೃಹತ್ ಸಭೆ ಕರೆಯಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವರದಿಯಿಂದ ತೊಂದರೆಗೆ ಒಳಗಾಗುವ ಎಲ್ಲಾ 157 ಗ್ರಾಮಗಳ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.
ಶಾಸಕರ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಗಳ ಅವಧಿಯಲ್ಲೂ ರಾಜ್ಯ ಸರ್ಕಾರದಿಂದ ಈ ವರದಿ ವಿರೋಧಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೆ. ಜನರಿಗೆ ತೊಂದರೆಯಾದರೆ ಹೊಸ ವರದಿ ತಯಾರಿಸುವುದಾಗಿ ಆಡಳಿತ ಭರವಸೆ ನೀಡಿತ್ತು. ಇದಕ್ಕಾಗಿ ಸಂಜಯ್ ಕುಮಾರ್ ಎಂಬ ಐಎಫ್ಎಸ್ ಅಧಿಕಾರಿಯ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, 6 ರಾಜ್ಯಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಈ ಸಮಿತಿಯ ಅವಧಿಯನ್ನು ಸೆಪ್ಟೆಂಬರ್ 27ರವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ ಎಂದು ಹಲವರು ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಆದರೆ, ಇದು ಕೇಂದ್ರ ಸರ್ಕಾರದ ಯೋಜನೆಯಲ್ಲ ಗೋವಾ ಫೌಂಡೇಶನ್ ಎಂಬ ಸಂಸ್ಥೆಯೇ ಈ ವರದಿಗೆ ಮೂಲ ಕಾರಣ. ಇದೊಂದು ಸಂಪೂರ್ಣ ಅವೈಜ್ಞಾನಿಕ ವರದಿ ಎಂದು ಹಿಂದೆ ಸುಪ್ರೀಂ ಕೋರ್ಟ್ಗೆ ತಿಳಿಸಲಾಗಿತ್ತು. ಈಗಲೂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ಕೇಳಿ ನೋಟಿಸ್ ನೀಡಲಾಗಿದೆ. ಕೋರ್ಟ್ನಿಂದ ಈಗ 7ನೇ ನೋಟಿಫಿಕೇಶನ್ ಬಂದಿರುವುದರಿಂದ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಈಗ ಬೀಸುವ ದೊಣ್ಣೆಯಿಂದ ಮಲೆನಾಡನ್ನು ತಪ್ಪಿಸಿಕೊಳ್ಳಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನ್ಯಾಯಾಲಯಗಳು ಸಾಮಾನ್ಯವಾಗಿ ಪರಿಸರದ ಪರವಾಗಿ ನಿರ್ಧಾರ ತಳೆಯುವುದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಲೆನಾಡಿನ ವಾಸ್ತವ ಪರಿಸ್ಥಿತಿಯ ಫೀಲ್ಡ್ ಪರಿಶೀಲನೆ ನಡೆಸುವ ಅಗತ್ಯವಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 157 ಗ್ರಾಮಗಳು ಇದರಿಂದ ಬಾಧಿತವಾಗುವುದರಿಂದ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ನಿರ್ಣಯ ಕೈಗೊಳ್ಳಬೇಕಿದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ್ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಕುಕ್ಕೆ ಪ್ರಶಾಂತ್ ಹಾಗೂ ದಿಂಡ ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
