ಶಿವಮೊಗ್ಗದ ಫುಡ್​​ ಕೋರ್ಟ್​ಗಳಿಗೆ ಎಸಿ ಡಾ, ಮೈತ್ರಿ ದಿಢೀರ್ ಭೇಟಿ, 15 ದಿನಗಳ ಗಡುವು​, ವಿಡಿಯೋ ನೋಡಿ 

ಹಂಚಿಕೊಳ್ಳಿ
WhatsApp Facebook X Telegram
Shimoga Food Court Raid 15-Day AC Warning ಫುಡ್_ ಕೋರ್ಟ್_ಗೆ ದಿಡೀರ್_ ಭೇಟಿ ನೀಡಿದ ಡಾ, ಮೈತ್ರಿ
Shimoga Food Court Raid 15-Day AC Warning ಫುಡ್_ ಕೋರ್ಟ್_ಗೆ ದಿಡೀರ್_ ಭೇಟಿ ನೀಡಿದ ಡಾ, ಮೈತ್ರಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸದ್ಯ ಶಿವಮೊಗ್ಗದಲ್ಲೀಗ ಮಹಿಳಾ ಅಧಿಕಾರಿಗಳಿಬ್ಬರು ಜೋರು ಸದ್ದುಮಾಡುತ್ತಿದ್ದಾರೆ. ಈ ಪೈಕಿ ಒಬ್ಬರಾದ ಇತ್ತೀಚೆಗೆ ಸಾಗರಕ್ಕೆ ವರ್ಗಾವಣೆಗೊಂಡಿದ್ದ ಡಾ.ಪ್ರತಿಭಾ ತಮ್ಮದೇ ಶೈಲಿಯಲ್ಲಿ ಜಂಬಿಟ್ಟಿಗೆ ಕ್ವಾರಿಗಳ ಮೇಲೆ ರೇಡ್ ನಡೆಸಿ ಸುದ್ದಿಯಾಗಿದ್ದರು. ಅಲ್ಲದೆ ಒತ್ತುವರಿ ತೆರವಿಗೆ ಜೆಸಿಬಿ ಕಾರ್ಯಾಚರಣೆ ನಡೆಸಿದ್ದು ಅವರ ಡೇರ್​ನೆಸ್​ಗೆ ಸಾಕ್ಷಿಯಾಗಿತ್ತು. ಈ ಬೆನ್ನಲ್ಲೆ ಅವರ ಕಾರ್ಯವೈಖರಿಗೆ ಸ್ವತಃ ಸಾಗರ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ ಶಿವಮೊಗ್ಗ ಎಸಿಯಾಗಿ ಆಗಮಿಸುತ್ತಲೆ ಡಾ. ಮೈತ್ರಿ ತಮ್ಮ ಕಾರ್ಯವೈಖರಿ ಹೇಗಿರುತ್ತೆ ಎಂಬುದನ್ನ ಸ್ಪಷ್ಟವಾಗಿಸ್ತಿದ್ದಾರೆ. ಸದ್ಯ ಇವರ ಕಾರ್ಯವೈಖರಿಗಿನ್ನೂ ಯಾರು ಅಡ್ಡಬಂದಿಲ್ಲ. 

ಅಧಿಕಾರ ವಹಿಸಿಕೊಳ್ಳುವ ವಿಚಾರದಲ್ಲಿಯೇ ಮೊದಲ ಗೆಲುವು ಸಾಧಿಸಿದ ಡಾ. ಮೈತ್ರಿ, ನಂತರ ಶಿವಮೊಗ್ಗದ ದೊಡ್ಡ ದೊಡ್ಡ ಹೋಟೆಲ್​ಗಳ ಮೇಲೆ ರೇಡ್ ನಡೆಸಿ ಪುಡ್​ ಪರೀಕ್ಷೆ ನಡೆಸಿದ್ದರು. ಅಲ್ಲದೆ ಶಿವಮೊಗ್ಗ ಫೇಮಸ್​ ಬೇಕರಿಗೆ ತೆರಳಿ ಆಹಾರ ತಪಾಸಣೆ ನಡೆಸಿದ್ದರು. ಇದರ ಬೆನ್ನಲ್ಲೆ ಶಿವಮೊಗ್ಗ ನಗರದ ಫುಡ್ ಕೋರ್ಟ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡದ ವ್ಯಾಪಾರಿಗಳಿಗೆ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದ ಅಧಿಕಾರಿಗಳ ತಂಡ ಬಿಸಿ ಮುಟ್ಟಿಸಿದೆ. ಸೆಪ್ಟೆಂಬರ್ 1 ರಂದು ನಗರದ ಗೋಪಿ ವೃತ್ತದ ಮಲ್ಲಿಕಾರ್ಜುನ ಚಿತ್ರಮಂದಿರದ ಸಮೀಪವಿರುವ ಸಸ್ಯಹಾರಿ ಫುಡ್ ಕೋರ್ಟ್ ಹಾಗೂ ಸವಾರ್ ಲೈನ್ ರಸ್ತೆಯಲ್ಲಿರುವ ಮಾಂಸಾಹಾರಿ ಫುಡ್ ಕೋರ್ಟ್‌ಗಳಿಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಸಮಗ್ರ ತಪಾಸಣೆ ನಡೆಸಿದರು. 

ನಿಯಮ ಉಲ್ಲಂಘಿಸಿದ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ನಿಗದಿತ ಗಡುವಿನೊಳಗೆ ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.ತಪಾಸಣೆ ವೇಳೆ ಬಹುತೇಕ ಮಳಿಗೆಗಳಲ್ಲಿ ಆಹಾರ ಸುರಕ್ಷತಾ ಪರವಾನಗಿ (ಲೈಸೆನ್ಸ್) ಪ್ರದರ್ಶಿಸದಿರುವುದು ಕಂಡುಬಂದಿದೆ. ಸಿಬ್ಬಂದಿಗೆ ಕೈತೊಳೆಯಲು ಕನಿಷ್ಠ ಸೋಪು ಮತ್ತು ಹ್ಯಾಂಡ್‌ವಾಶ್ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಉಪವಿಭಾಗಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರನ್ನು ಸ್ವಚ್ಛತೆಯಿಲ್ಲದ ಕೊಳಕು ಬಕೆಟ್‌ಗಳಲ್ಲಿ ಸಂಗ್ರಹಿಸಿರುವುದು ಹಾಗೂ ಜ್ಯೂಸ್ ತಯಾರಿಕೆಯಲ್ಲಿ ಶುದ್ಧ ನೀರಿನ ಬದಲಾಗಿ ಹೊರಗಡೆ ಎಲ್ಲೆಂದರಲ್ಲಿ ಬಳಸುವ ಐಸ್ ಗಡ್ಡೆಗಳನ್ನು ಬಳಸುತ್ತಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ಕಡ್ಡಾಯವಾಗಿ ಕೈಗವಸು ಮತ್ತು ಹೇರ್ ಕ್ಯಾಪ್ ಬಳಸದಿರುವ ಬಗ್ಗೆಯೂ ಎಚ್ಚರಿಕೆ ನೀಡಲಾಯಿತು.ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. 

ಚಿಕನ್ ಹಾಗೂ ಗೋಬಿ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕಗಳು ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಕೃತಕ ಬಣ್ಣಗಳನ್ನು (ಕೆಂಪು ಪುಡಿ) ಬೆರೆಸುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದರು. ಗುಣಮಟ್ಟವಿಲ್ಲದ ಅಡುಗೆ ಎಣ್ಣೆ ಹಾಗೂ ಪಾಮ್ ಆಯಿಲ್ ಬಳಸುತ್ತಿರುವ ಬಗ್ಗೆ ವ್ಯಾಪಾರಿಗಳನ್ನು ಪ್ರಶ್ನಿಸಿದರು. ಇದೇ ವೇಳೆ ಕೆಲವು ವ್ಯಾಪಾರಿಗಳು ತಯಾರಿಸಿದ್ದ ಮಾಂಸಾಹಾರಿ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹಿಸಿದ ತಂಡವು, ಅವುಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದೆ.

ಇದಕ್ಕೂ ಮುನ್ನ ಆಹಾರ ಉದ್ಯಮಗಳಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ ಇದೇ ತಂಡವು ಸಾಗರ ರಸ್ತೆಯ ಹೋಟೆಲ್ ಹರ್ಷ ಫರ್ನ್, ತಾವರೆಕೊಪ್ಪದ ನಿರಾಶ್ರಿತರ ಪರಿಹಾರ ಕೇಂದ್ರ, ವಿನೋಬನಗರದ ಸವಿ ಬೇಕರಿ ಹಾಗೂ ಗಾಂಧಿನಗರದ ವಿಧಾತ್ರಿ ಭವನಕ್ಕೆ ಭೇಟಿ ನೀಡಿತ್ತು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ತಕ್ಷಣ ವಿಲೇವಾರಿ ಮಾಡುವುದು, ಹಾಲು, ಮಾಂಸ, ಮೊಟ್ಟೆಯನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸುವುದು, ರೆಫ್ರಿಜಿರೇಟರ್ ನಿರ್ವಹಣೆ ಹಾಗೂ ಆಹಾರ ತಯಾರಿಸುವ ಸಿಬ್ಬಂದಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. 

ಇನ್ನೂ ಈ ಬಗ್ಗೆ ಮಾತನಾಡಿರುವ ಎಸಿಯವರು ಆಹಾರ ಸುರಕ್ಷತಾ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ತಪಾಸಣೆ ವೇಳೆ ಕಂಡುಬಂದಿರುವ ಲೋಪದೋಷಗಳ ಕುರಿತ ಸಮಗ್ರ ವರದಿಯನ್ನು ಸಿದ್ಧಪಡಿಸಿ, ಮುಂದಿನ ಕಠಿಣ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ವಿ.ಎಸ್. ರಾಜೀವ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಹೆಲ್ತ್ ಇನ್ಸ್‌ಪೆಕ್ಟರ್ ಬಸವರಾಜ್, ತಹಶೀಲ್ದಾರ್ ಕಚೇರಿಯ ಆರ್‌ಐ ಸತೀಶ್, ಗ್ರಾಮ ಆಡಳಿತಾಧಿಕಾರಿಗಳಾದ ದೊಡ್ಡ ಬಸಪ್ಪ ರೆಡ್ಡಿ, ದೀಪಕ್ ಹಾಗೂ ಸಿಬ್ಬಂದಿ ಚೇತನ್ ಮತ್ತಿತರರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor