ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ದೊಣ್ಣೆ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಆರೋಪಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯವು ಶಿಕ್ಷೆ ವಿಧಿಸಿತೀರ್ಪು ನೀಡಿದೆ. ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಹತ್ತಿರದ ನಿವಾಸಿ ನಸೀನಾ ಬಾನು (ವೃತ್ತಿಯಲ್ಲಿ ಶಿಕ್ಷಕಿ) ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾರೆ.
ಪ್ರಕರಣದ ವಿವರ
ಶಿವಮೊಗ್ಗದ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಹತ್ತಿರದ ನಿವಾಸಿ ಸಕ್ರೀಯ ಬಿನ್ ದಾದಾರ್ಪಿ ಎಂಬುವರ ಕೊನೆಯ ತಂಗಿಯ ಮದುವೆ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ ಆರೋಪಿ ನಸೀನಾ ಬಾನು ಹಾಗೂ ಇನ್ನೊಬ್ಬರು (ಪ್ರಸ್ತುತ ಮೃತಪಟ್ಟಿದ್ದಾರೆ) ಸಕ್ರೀಯ ಅವರ ಮೇಲೆ ದೊಣ್ಣೆ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಒಡ್ಡಿದ್ದರು. ಈ ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ರಾಮಕುಮಾರ್ ವಿ. ಅವರು ನ್ಯಾಯಾಲಯಕ್ಕೆ ಸಿ.ಸಿ. 1008/2024 ರಂತೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಮಾನ್ಯ ನ್ಯಾಯಾಧೀಶರಾದ ಪದ್ಮಾಕರ ವನಕುದ್ರೆ ಅವರು, ಆರೋಪಿ ನಸೀನಾ ಬಾನು ಅವರಿಗೆ ಐಪಿಸಿ ಕಲಂ 323, 324 ಮತ್ತು 506 ರಡಿಯ ಅಪರಾಧಗಳಡಿಯಲ್ಲಿ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಗೋವಿಂದರಾಜ್ ಎನ್. ವಾದ ಮಂಡಿಸಿದ್ದರು.
