ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಜಿಲ್ಲೆ / ಇಲ್ಲಿ ನ ತಾಲ್ಲೂಕು ಒಂದರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಖಾಸಗಿತನಕ್ಕೆ ಧಕ್ಕೆ ತಂದು ವಿಡಿಯೋ ಚಿತ್ರೀಕರಿಸಿದ್ದಷ್ಟೆ ಅಲ್ಲದೆ (Private Video) ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಗುರುತು ಬಹಿರಂಗವಾಗದಂತೆ ಹೆಸರು, ವಯಸ್ಸು, ಗ್ರಾಮ, ಕುಟುಂಬ ಹಾಗೂ ಇತರ ವೈಯಕ್ತಿಕ ವಿವರಗಳನ್ನು ಇಲ್ಲಿ ಪ್ರಕಟಿಸಲಾಗಿಲ್ಲ.
ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಪ್ರವೇಶಿಸಿ, ಅವರು ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿ, ಅವರು ಪ್ರತಿರೋಧ ವ್ಯಕ್ತಪಡಿಸಿದಾಗ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಘಟನೆಯ ಬಳಿಕವೂ ಮಹಿಳೆಯನ್ನು ಹಿಂಬಾಲಿಸಿ ತೊಂದರೆ ನೀಡಿದ್ದಾನೆ ಎಂಬ ಆರೋಪವೂ ಎಫ್ಐಆರ್ನಲ್ಲಿದೆ.
ಮಹಿಳೆಯ ಖಾಸಗಿ ವಿಡಿಯೋವನ್ನು ವಾಟ್ಸಾಪ್ ಗುಂಪಿನಲ್ಲಿ ಹಂಚಲಾಗಿದೆ ಹಾಗೂ ಪ್ರಕರಣದಲ್ಲಿರುವ ಮತ್ತಿಬ್ಬರು ಆರೋಪಿಗಳು ಆ ವಿಡಿಯೋವನ್ನು ಇತರರಿಗೆ ತೋರಿಸಿ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 74, 75, 78, 79, 351(2), 3(5) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(E), 67 ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಹಿಳೆಯ ಗೌರವಕ್ಕೆ ದಕ್ಕೆ ತರುವುದು, ಸಮ್ಮತಿಗೆ ವಿರುದ್ಧವಾಗಿ ವರ್ತಿಸುವುದು ಅಪರಾಧವಾಗಿದ್ದು, ಈ ಸಂಬಂಧ ಯಾವುದೇ ಅಸಹನೀಯ ವರ್ತನೆಗಳು ಎದುರಾದರಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ತುರ್ತು ಪೊಲೀಸ್ ಸಹಾಯವಾಣಿ 122 ಗೆ ಸಂಪರ್ಕಿಸಬಹುದಾಗಿದೆ.
