ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಬೈಪಾಸ್ ಹೊಸ ಬ್ರಿಡ್ಜ್ ಪಕ್ಕದ ರಸ್ತೆಯಲ್ಲಿ ಸೀಗೇಹಟ್ಟಿ ಕ್ರಾಸ್ ಬಳಿಯಲ್ಲಿ ಅಗತ್ಯ ಪರವಾನಗಿ ಹಾಗೂ ಖರೀದಿ ದಾಖಲೆಗಳಿಲ್ಲದೆ 6 ಜಾನುವಾರುಗಳನ್ನು ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನವನ್ನ ತಡೆದು ಕೇಸ್ ದಾಖಲಿಸಿದ ದೊಡ್ಡಪೇಟೆ ಠಾಣೆ ಪೊಲೀಸರು (Doddapete Police) ವಾಹನದಲ್ಲಿದ್ದ 3 ಹಸು, 2 ಎತ್ತು ಮತ್ತು 1 ಕರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಚೀತಾ ಗಸ್ತಿನಲ್ಲಿದ್ದಾಗ, ಈ ಕಾರ್ಯಾಚರಣೆ ನಡೆದಿದೆ. ನಡೆದ ಕಾರ್ಯಾಚರಣೆಯ ವಿವರ ಗಮನಿಸುವದಾದರೆ, ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ಪೊಲೀಸರಿಗೆ ಇನ್ಫಾರ್ಮರ್ ಮಾಹಿತಿ ಕೊಟ್ಟಿದ್ದರು. ಈ ಮಾಹಿತಿ ಆಧರಿಸಿ ಶಿವಮೊಗ್ಗ ಬೈಪಾಸ್ ಸೇತುವೆ ಸಮೀಪ ಪೊಲೀಸರು ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಶಿವಮೊಗ್ಗ ಬಸ್ ನಿಲ್ದಾಣದ ಕಡೆಯಿಂದ ಬಂದ ಅಶೋಕ್ ಲೈಲ್ಯಾಂಡ್ ವಾಹನವನ್ನು ಹಳೆ ಬೈಪಾಸ್ ಸೇತುವೆಯ ಸೀಗೆಹಟ್ಟಿ ಕ್ರಾಸ್ ಬಳಿ ತಡೆದು ಪರಿಶೀಲಿಸಿದ್ದ ಪೊಲೀಸರಿಗೆ ಅದರಲ್ಲಿ 3 ಹಸು, 2 ಎತ್ತು ಹಾಗೂ 1 ಕರು ಪತ್ತೆಯಾಗಿದೆ.
ವಿಚಾರಣೆ ವೇಳೆ ರಾಣೆಬೆನ್ನೂರು ಸಂತೆಯಲ್ಲಿ ಖರೀದಿಸಿದ ಜಾನುವಾರವನ್ನ ವ್ಯಕ್ತಿಯೊಬ್ಬರಿಗೆ ನೀಡಲು ಕೊಂಡೊಯ್ಯುತ್ತಿದ್ದುದಾಗಿ ಚಾಲಕ ತಿಳಿಸಿದ್ದಾನೆ. ಆದರೆ ಇದಕ್ಕೆ ಸಂಬಂಧಿಸಿದ ಪರವಾನಗಿ ಅಥವಾ ಖರೀದಿ ರಶೀದಿ ಕೇಳಿದಾಗ ಯಾವುದೇ ದಾಖಲೆ ಇಲ್ಲ ಎಂದು ಆತ ತಿಳಿಸಿದ್ದಾನೆ. ಹೀಗಾಗಿ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ ಕಲಂ 5, 7, 12 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 11 ಅಡಿ ಪ್ರಕರಣ ದಾಖಲಿಸಿದ್ದಾರೆ.
