ರೈತನ ಮಗಳಿಗೆ ವೀಸಾ ಸಂಸ್ಥೆಯಲ್ಲಿ ₹46.33 ಲಕ್ಷದ ಉದ್ಯೋಗ; ಇದು ಸಾಧನೆ

ಹಂಚಿಕೊಳ್ಳಿ
WhatsApp Facebook X Telegram
ಹಾವೇರಿಯ ಹಟಿಮತ್ತೂರು ಗ್ರಾಮದ ರೈತ ಕುಟುಂಬದ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ ಅವರು ಆಳ್ವಾಸ್‌ನಲ್ಲಿ ಓದುತ್ತಲೇ ವೀಸಾ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಪಡೆದು, ಬಳಿಕ ವಾರ್ಷಿಕ ₹46.33 ಲಕ್ಷ ಮೌಲ್ಯದ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.

ಮಲೆನಾಡು ಟುಡೆ ಸುದ್ದಿ / ಹಾವೇರಿ ಜಿಲ್ಲೆಯ ಹಟಿಮತ್ತೂರು ಗ್ರಾಮದ ರೈತ ಕುಟುಂಬದ ವಿದ್ಯಾರ್ಥಿನಿಯೊಬ್ಬರ (Farmers Daughter)ಪ್ರತಿಭೆಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶ ದೊರೆತಿದೆ. ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ ಅವರು ಜಾಗತಿಕ ಪಾವತಿ ತಂತ್ರಜ್ಞಾನ ಸಂಸ್ಥೆ ವೀಸಾ (Visa) ದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.

ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಒಳಗೊಂಡಂತೆ ಸೃಷ್ಟಿ ಅವರಿಗೆ ವಾರ್ಷಿಕ ₹46.33 ಲಕ್ಷ ಮೌಲ್ಯದ ಉದ್ಯೋಗ ಕೊಡುಗೆ ದೊರೆತಿದೆ. ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದಿರುವ ವಿದ್ಯಾರ್ಥಿನಿಗೆ ಕಾಲೇಜು ಅವಧಿಯಲ್ಲಿಯೇ ದೊರೆತ ಇಂಟರ್ನ್‌ಶಿಪ್ ಈ ಉದ್ಯೋಗಾವಕಾಶಕ್ಕೆ ಪ್ರಮುಖ ಹಾದಿಯಾಗಿದೆ. ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ವೃದ್ಧಿಗಾಗಿ ಗುಣಮಟ್ಟದ ಇಂಟರ್ನ್‌ಶಿಪ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಅದರ ಭಾಗವಾಗಿ ಸೃಷ್ಟಿ ಅವರು 6ನೇ ಸೆಮಿಸ್ಟರ್‌ನಲ್ಲಿದ್ದಾಗ ವೀಸಾ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಮಾಡುವ ಅವಕಾಶ ಪಡೆದಿದ್ದರು. ವೀಸಾ ಸಂಸ್ಥೆಯಲ್ಲಿ 10 ವಾರಗಳ ಕಾಲ ನಡೆದ ಇಂಟರ್ನ್‌ಶಿಪ್‌ನಲ್ಲಿ ಅವರು ₹90,000 ಸ್ಟೈಪೆಂಡ್‌ನೊಂದಿಗೆ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಸಂಸ್ಥೆಯ ವಾತಾವರಣದಲ್ಲಿ ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದ ಅವರು, ಬಳಿಕ ಅದೇ ಸಂಸ್ಥೆಯಲ್ಲಿ ಪೂರ್ಣಾವಧಿಯ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ಹೊಂದುವ ಸಂಸ್ಥೆಗಳಲ್ಲಿ ಗುಣಮಟ್ಟದ ಇಂಟರ್ನ್‌ಶಿಪ್ ಅವಕಾಶಗಳನ್ನು ಕಲ್ಪಿಸುವ ಆಳ್ವಾಸ್‌ನ ಪ್ರಯತ್ನ ಸೃಷ್ಟಿ ಅವರ ಪಾಲಿಗೆ ಜಾಗತಿಕ ಕಂಪನಿಯ ಉದ್ಯೋಗ ಪಡೆಯುವ ಅವಕಾಶವಾಗಿ ಪರಿಣಮಿಸಿದೆ. ವೀಸಾ ಸಂಸ್ಥೆ ನೀಡಿರುವ ಉದ್ಯೋಗ ಕೊಡುಗೆಯ ಒಟ್ಟು ಮೌಲ್ಯ ವಾರ್ಷಿಕ ₹46.33 ಲಕ್ಷವಾಗಿದ್ದು, ವೇತನದ ಜತೆಗೆ ವಿವಿಧ ಸೌಲಭ್ಯಗಳೂ ಇದರಲ್ಲಿ ಸೇರಿವೆ. ಕುಟುಂಬಕ್ಕೆ ₹7.50 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ, ₹25,000 ಮೌಲ್ಯದ ಹೊರರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಗರಿಷ್ಠ ₹3 ಲಕ್ಷದವರೆಗೆ ಶಿಕ್ಷಣ ಸಹಾಯಧನ ದೊರೆಯಲಿದೆ.

ವೀಸಾದಲ್ಲಿ ದೊರೆತ ಇಂಟರ್ನ್‌ಶಿಪ್ ತಮ್ಮ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು ಎಂದು ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ ತಿಳಿಸಿದ್ದಾರೆ. ಆಳ್ವಾಸ್ ಸಂಸ್ಥೆ ಇಂಟರ್ನ್‌ಶಿಪ್‌ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸೂಕ್ತವಾದ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸುತ್ತದೆ. ವೀಸಾದಲ್ಲಿ ದೊರೆತ ಇಂಟರ್ನ್‌ಶಿಪ್ ತಮಗೆ ಅಮೂಲ್ಯವಾದ ಉದ್ಯಮ ಅನುಭವ ನೀಡಿದ್ದು, ಅದೇ ಅವಕಾಶ ಕನಸಿನ ಉದ್ಯೋಗ ಪಡೆಯಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor