ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 29 ರಿಂದ 31 ರವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಠದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ಈ ಕುರಿತು ಮಲೆನಾಡುಟುಡೆಗೆ ಮಾಹಿತಿ ನೀಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ 355ನೇ ಆರಾಧನಾ ಮಹೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿಸುತ್ತಿದ್ದೇವೆ. ಇಂದು ಸಂಜೆ (ಶುಕ್ರವಾರ) 6 ಗಂಟೆಯಿಂದ ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಹಾಗೂ ಧ್ವಜಾರೋಹಣ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಾಳೆ ಬೆಳಿಗ್ಗೆ ಅಂದರೆ ಆಗಸ್ಟ್ 29 ರಂದು 6 ಗಂಟೆಯಿಂದ ಅಷ್ಟೋತ್ತರ ಕಾರ್ಯಕ್ರಮ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕಗಳು ಜರುಗಲಿವೆ. ಬೆಳಿಗ್ಗೆ 10 ಗಂಟೆಯ ನಂತರ ಸರ್ವ ಸೇವೆಗಳು ಪ್ರಾರಂಭವಾಗಲಿವೆ. ಸಂಜೆ 6 ಗಂಟೆಯ ನಂತರ ಮಠದಲ್ಲಿ ಬೆಳ್ಳಿ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿವೆ” ಎಂದು ವಿವರ ನೀಡಿದರು.
ಇದೇ ಮಾದರಿಯ ಧಾರ್ಮಿಕ ಕಾರ್ಯಕ್ರಮಗಳು ಮಾರನೇ ದಿನವೂ ಅಂದರೆ ಆಗಸ್ಟ್ಸ್ 30 ರಂದು ಮುಂದುವರಿಯಲಿವೆ. ಸೋಮವಾರದಂದು ಮಠದ ಹೊರಾಂಗಣದಲ್ಲಿ ನವರಥ ರಥೋತ್ಸವ ಹಾಗೂ ವೈಭವದ ಮಹಾರಥೋತ್ಸವ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧರ್ಮಪ್ರಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತಿದ್ದೇವೆ, ಎಂದು ಸುರೇಶ್ ಅವರು ಕೋರಿದರು.
ಭಕ್ತರು ಸಲ್ಲಿಸುವ ಸೇವೆಗಳ ಕುರಿತು ಮಾತನಾಡಿದ ಅವರು, ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು 6 ರಿಂದ 7 ರೀತಿಯ ವಿಶೇಷ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮಠಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಜೊತೆಗೆ ಮೂರೂ ದಿನಗಳ ಕಾಲ ಸಾರ್ವಜನಿಕರಿಗಾಗಿ ನಿರಂತರ ಅನ್ನದಾಸೋಹ ಆಯೋಜಿಸಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಲು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಅತ್ಯಂತ ರುಚಿಕರ ಹಾಗೂ ಸಾತ್ವಿಕ ಆಹಾರವನ್ನು ಉಣಬಡಿಸಲಾಗುತ್ತಿದೆ, ಎಂದರು.
ಅನ್ನದಾಸೋಹದ ಪ್ರಮಾಣ ಹಾಗೂ ಭದ್ರತೆಯ ಕುರಿತು ಮಾಹಿತಿ ಹಂಚಿಕೊಂಡ ಅವರು, ಕಳೆದ ವರ್ಷದ ಆರಾಧನಾ ಮಹೋತ್ಸವದಲ್ಲಿ ಸುಮಾರು 48 ರಿಂದ 50 ಸಾವಿರ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದ್ದರು. ಈ ಬಾರಿ ಭಕ್ತರ ಸಂಖ್ಯೆ ಅದಕ್ಕಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ (SP) ನಿಖಿಲ್ ಅವರು ನೆನ್ನೆ ಖುದ್ದಾಗಿ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಇಲಾಖೆಯಿಂದ ಸಂಪೂರ್ಣ ಭದ್ರತೆ ಒದಗಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಜಿಲ್ಲಾಧಿಕಾರಿಗಳು (DC) ಹಾಗೂ ಮಹಾನಗರ ಪಾಲಿಕೆ ಕಮಿಷನರ್ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರಿಗೆ ಮಠದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ, ಎಂದು ತಿಳಿಸಿದರು.
