ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆ ಹಾಗೂ ರಿಪ್ಪನ್‌ಪೇಟೆಯ ಕೆಪಿಎಸ್ ಶಾಲೆಯ ದತ್ತಾಂಶ ನಿರ್ವಹಣಾ ಸಹಾಯಕ ಹಾಗೂ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರೊಂದಿಗೆ ಸೋನಾಲಿಕ ಟ್ರಾಕ್ಟರ್ ಪ್ರೈ. ಲಿ. ಸಂಸ್ಥೆಯಲ್ಲಿರುವ ಹುದ್ದೆಗಳ ನೇಮಕಾತಿಗಾಗಿ ಆ.25ರಂದು ಶಿವಮೊಗ್ಗದಲ್ಲಿ ನೇರ ಸಂದರ್ಶನ (shivamogga job) ಆಯೋಜಿಸಲಾಗಿದೆ. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಅರ್ಹ ಉದ್ದಿಮೆದಾರರಿಂದಲೂ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ಗಮನಿಸಿ
ಶಿವಮೊಗ್ಗ ವ್ಯಾಪ್ತಿಯಲ್ಲಿ 40 ಹುದ್ದೆಗಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಖಾಲಿಯಿರುವ 20 ಕಾರ್ಯಕರ್ತೆ ಹಾಗೂ 20 ಸಹಾಯಕಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಶಿವಮೊಗ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆ.29ರೊಳಗೆ ಸಂಬಂಧಪಟ್ಟ ಕಚೇರಿಗೆ ಸಲ್ಲಿಸಬೇಕು.ಹುದ್ದೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08182-295110 ಎಂದು ಶಿವಮೊಗ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರಾವತಿಯಲ್ಲಿ 2 ತಾತ್ಕಾಲಿಕ ಹುದ್ದೆಗಳು
ಭದ್ರಾವತಿ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 16 ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಖಾಲಿಯಿರುವ 1 ಕಾರ್ಯಕರ್ತೆ ಮತ್ತು 1 ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಎರಡೂ ಹುದ್ದೆಗಳು ತಾತ್ಕಾಲಿಕ ಗೌರವಧನ ಆಧಾರಿತವಾಗಿವೆ. ಅರ್ಜಿ ಸಲ್ಲಿಸಲು ಬಯಸುವವರು ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆ ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಆ.29ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08282-295051 ಅನ್ನು ಸಂಪರ್ಕಿಸಬಹುದು ಎಂದು ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.25ರಂದು ಉದ್ಯೋಗ ನೇರ ಸಂದರ್ಶನ
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೋನಾಲಿಕ ಟ್ರಾಕ್ಟರ್ ಪ್ರೈ. ಲಿ. ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆ.25ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು 18ರಿಂದ 30 ವರ್ಷದೊಳಗಿನವರಾಗಿರಬೇಕು ಎಂದು ಅರ್ಹತೆ ನಿಗದಿಪಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗದಲ್ಲಿ ನೇರ ಸಂದರ್ಶನ ನಡೆಯಲಿದೆ ಎಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
ಕೆಪಿಎಸ್ ಶಾಲೆಯಲ್ಲಿ 2 ಹುದ್ದೆಗಳು
ರಿಪ್ಪನ್‌ಪೇಟೆ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಖಾಲಿಯಿರುವ 2 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದತ್ತಾಂಶ ನಿರ್ವಹಣಾ ಸಹಾಯಕರು (Data Management Assistant) ಮತ್ತು ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಆ.22ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ. ಹುದ್ದೆಗಳ ಅರ್ಹತೆ, ಅರ್ಜಿ ಸಲ್ಲಿಕೆ ಮತ್ತು ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ 94822 17337 ಅಥವಾ 94486 07255 ಸಂಖ್ಯೆಯನ್ನು ಸಂಪರ್ಕಿಸಬಹುದು.
ಉದ್ದಿಮೆದಾರರಿಗೆ ಶೇ.60 ಸಹಾಯಧನ ಸೇರಿದಂತೆ ವಿವಿಧ ನೆರವು
ರಾಜ್ಯ ಸರ್ಕಾರವು ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಅರ್ಹ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಿದೆ. ಸಾಫ್ಟ್ ಸೀಡ್ ಕ್ಯಾಪಿಟಲ್, ಶೇ.60 ಸಹಾಯಧನ, ಸಾಲ ಶುಲ್ಕ ಮರುಪಾವತಿ ಮತ್ತು ವಿದ್ಯುಚ್ಛಕ್ತಿ ಸಹಾಯಧನ ಯೋಜನೆಗಳಡಿ ನೆರವು ಒದಗಿಸಲಾಗುತ್ತದೆ.ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಸಾಲ ಪಡೆದು ಹೊಸದಾಗಿ ಉದ್ದಿಮೆ ಸ್ಥಾಪಿಸಲು ಇಚ್ಛಿಸಿರುವ ಉದ್ದಿಮೆದಾರರೂ ಯೋಜನೆಗಳ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಗಳ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆಯ ವಿವರಗಳಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ನೆಹರೂ ರಸ್ತೆ, ಶಿವಮೊಗ್ಗ ಅವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಮೂಲ : ಶಿವಮೊಗ್ಗ ವಾರ್ತಾಇಲಾಖೆ
