Fake Currency Circulation / ಮಲೆನಾಡು ಟುಡೆ ಸುದ್ದಿ / ಸಾಗರ / ಕಳೆದ ಎರಡು ತಿಂಗಳಿನಿಂದ ಸಾಗರದಲ್ಲಿ ಕಳ್ಳನೋಟ್ಟಿ ಚಲಾವಣೆ ಆಗ್ತಿದೆಯಂತೆ. ಈ ಬಗ್ಗೆ ಸ್ವತಃ ಮುಖಂಡರೊಬ್ಬರು ಸಾಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಕೆಲದಿನಗಳಿಂದ ಖೋಟಾ ನೋಟಿನ ವಿಚಾರ ಸದ್ದು ಮಾಡುತ್ತಿದೆಯಾದರೂ ಪೊಲೀಸ್ ಇಲಾಖೆ ಹೆಚ್ಚು ಗಮನ ಹರಿಸಿಲ್ಲ. ಈ ನಡುವೆ ಇದೀಗ ಸಾಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನೇತಾಜಿ ಸುಭಾಷ್ಚಂದ್ರ ಯುವ ಟ್ರಸ್ಟ್ ಅಧ್ಯಕ್ಷ ಸುಭಾಷ್ ಕೌತಳ್ಳಿ ಸಾಗರ ಪೇಟೆಯಲ್ಲಿ 500 ರೂ., 200 ರೂ. ಮತ್ತು 50 ರೂ. ಕಳ್ಳನೋಟು ವ್ಯಾಪಕವಾಗಿ ಓಡಾಡುತ್ತಿದೆ ಅಂತಾ ದೂರಿದ್ದಾರೆ.
ನಿನ್ನೆ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದುರ್ಗಾಂಬಾ ದೇವಸ್ಥಾನದ ಎದುರು ನಮ್ಮ ರೇಣುಕಾಂಬಾ ಫ್ಲವರ್ ಸ್ಟಾಲ್ ಇದ್ದು, ಪ್ತತಿದಿನ ನಮ್ಮ ಅಂಗಡಿಗೆ ಮೂರರಿಂದ ನಾಲ್ಕು ಕಳ್ಳನೋಟು ಬರುತ್ತಿದ್ದು ಯಾರು ತಂದು ಕೊಡುತ್ತಾರೆ ಎಂದು ಗೊತ್ತಾಗುತ್ತಿಲ್ಲ ಅಂತಾ ದೂರಿದ್ದಾರೆ.
ಮಳೆಗಾಲದಲ್ಲಿ ಫುಟ್‌ಪಾತ್ ವ್ಯಾಪಾರಿಗಳ ಗೋಳು ತೀರ ಸಂಕಷ್ಟದಲ್ಲಿದೆ. ಮಂದ ಬೆಳಕಿನಲ್ಲಿ ಯಾರೋ ಬಂದು ಕಳ್ಳ ನೋಟು ಕೊಟ್ಟು ಹೋಗುತ್ತಾರೆ. ನಾವು ಅದರ ಚಲಾವಣೆಗೆ ಹೋದಾಗ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಒಂದು ಕಡೆ ಹಣ ಕಳೆದು ಕೊಂಡ ದುಃಖವಾದರೆ ಇನ್ನೊಂದು ಕಡೆ ಪೊಲೀಸ್ ವಿಚಾರಣೆ ಆತಂಕ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಇನ್ನೂ ನಕಲಿ ನೋಟ್‌ಗಳಲ್ಲಿ ಗಾಂಧಿ ಭಾವಚಿತ್ರ, 500, 200, 50ರ ಸಂಖ್ಯೆ ಇರುವುದಿಲ್ಲ. ಆದರೆ ಈ ಬಗ್ಗೆ ಜಾಗೃತಿ ಉಂಟಾಗುತ್ತಿಲ್ಲ ಎಂದ ಅವರು ಬ್ಯಾಂಕ್‌ನಲ್ಲಿ ಕಳ್ಳನೋಟು ಸಿಕ್ಕ ತಕ್ಷಣ ಹರಿದು ಹಾಕಿ ಪೊಲೀಸರಿಗೆ ತಿಳಿಸುತ್ತಾರೆ. ಆದರೆ ಕಳ್ಳನೋಟಿನ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ ಎಂದು ದೂರಿದರು.
