Kargal Police Help ಮಲೆನಾಡು ಟುಡೆ ಸುದ್ದಿ / ಕಾರ್ಗಲ್ / ದುಡಿಮೆಗೆ ಅಂತಾ ಬಂದು ದುಡ್ಡಿಲ್ಲದೆ ಮರಳ ತಮ್ಮೂರಿಗೆ ಹೊರಟವರು ದಾರಿ ತೋಚದೆ ನಿಂತಿದ್ದಾಗ ಮಾನವೀಯತೆ ತನ್ನಿಂದ ತಾನೆ ಸಹಾಯ ಮಾಡುತ್ತದೆ ಎಂಬುದಕ್ಕೆ ಕಾರ್ಗಲ್ ಪೊಲೀಸರು ಉದಾಹರಣೆಯಾಗಿದ್ದಾರೆ. ತಮ್ಮೂರಿಗೆ ಹೋಗಲು ಬಸ್ ಟಿಕೆಟ್ಗೂ ದುಡ್ಡಿಲ್ಲದೆ ನಿಂತಿದ್ದ ಕಾರ್ಮಿಕ ಕುಟುಂಬವೊಂದಕ್ಕೆ ಕಾರ್ಗಲ್ ಪೊಲೀಸರು ಆರ್ಥಿಕ ನೆರವು ನೀಡಿ, ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ನಡೆದ ಘಟನೆ ಹೀಗಿದೆ
ಬಳ್ಳಾರಿ ಮೂಲದ ಈ ಕುಟುಂಬವೊಂದು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಜೋಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಕೆಲಸ ಅರಸಿ ಬಂದಿತ್ತು. ಗಂಡ, ಹೆಂಡತಿ ಹಾಗೂ ಮಕ್ಕಳು ಸೇರಿದಂತೆ ಇಡೀ ಕುಟುಂಬವು ಅಲ್ಲಿ ನೆಲೆಸಿತ್ತು. ಆದರೆ ಈ ಮಧ್ಯೆ ಕುಟುಂಬವು ತಮ್ಮ ಊರಿಗೆ ಮರಳಿ ಹೋಗಲು ನಿರ್ಧರಿಸಿತ್ತು. ಆದರೆ, ಅವರ ಬಳಿ ಪ್ರಯಾಣಕ್ಕೆ ಬೇಕಾದ ಕನಿಷ್ಠ ಹಣವೂ ಇರಲಿಲ್ಲ. ಆದರೂ ದೇವರಿಟ್ಟಂತೆ ಆಗುತ್ತದೆ ಎಂದು ಕುಟುಂಬ ಬಳ್ಳಾರಿಗೆ ಹೊರಟು ನಿಂತಿತ್ತು. ಅಷ್ಟರಲ್ಲಿ, ದುಡ್ಡಿಲ್ಲದ ನಿಜವಿಧಿ ಅವರನ್ನ ಕಾರ್ಗಲ್ ಪಟ್ಟಣದಲ್ಲಿ ಅತಂತ್ರವಾಗಿಸಿತ್ತು.
ಈ ಬಗ್ಗೆ ಸ್ಥಳೀಯರಿಂದ ಕಾರ್ಗಲ್ ಪೊಲೀಸ್ ಠಾಣೆಯ ಪಿ.ಎಸ್.ಐ. ಅನಿಲ್ ಹಾಗೂ ಸಿಬ್ಬಂದಿ ಹೆಡ್ ಕಾನ್‌ಸ್ಟೇಬಲ್ ಅಣ್ಣಪ್ಪ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಪುರುಷೋತ್ತಮ್ ಮಾಹಿತಿ ಪಡೆದು ಸ್ತಳಕ್ಕೆ ಬಂದಿದ್ದಾರೆ. ಅಲ್ಲಿಯೇ ದಂಪತಿಯನ್ನು ವಿಚಾರಿಸಿದ್ದಾರೆ.
ಬಳಿಕ ಕಾರ್ಗಲ್-ಜೋಗ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಹಾಗೂ ಜೋಗದಲ್ಲಿ ಕಾಮಗಾರಿ ನಡೆಸುತ್ತಿರುವ ಎಸ್.ಎನ್.ಸಿ. (SNC) ಕಂಪನಿಯ ಪ್ರತಿನಿಧಿಗಳೊಂದಿಗೆ ಮಾತನಾಡಿ ನಿರಾಶ್ರಿತ ಕುಟುಂಬಕ್ಕೆ ದುಡ್ಡು ಹೊಂದಿಸಿಕೊಟ್ಟು ಅವರು ಸುರಕ್ಷಿತವಾಗಿ ಬಳ್ಳಾರಿಗೆ ಹೋಗುವರೆಗೂ ಜವಬ್ದಾರಿವಹಿಸಿದ್ರು.
ಜನರು ಪೊಲೀಸರು ಕೆಲಸಕ್ಕೆ ಶಹ್ಬಬಾಸ್ ಅನ್ನುತ್ತಾ ಮಾನವೀಯತೆ ಇನ್ನೂ ಇದೆ ಕಣ್ರಿ ಅಂಥಿದ್ರೆ, ಪೊಲೀಸರು ಮಾತ್ರ ಇದರಲ್ಲೇನಿದೆ ನಮ್ಮ ಡ್ಯೂಟಿ, ಕೆಲಸದಲ್ಲಿ ಇಂತಹ ಸನ್ನಿವೇಶ ಬಹಳ ಬರುತ್ತದೆ. ನಮ್ಮ ಕೈಲಾಗಿದ್ದು ಮಾಡುತ್ತೇವಷ್ಟೆ ಅಂತಾ ಸರಳವಾಗಿಯೇ ಘಟನೆ ವಿವರಿಸ್ತಿದ್ರು!
