ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಹಾವು ಹಾಗೂ ಶ್ವಾನ ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವ್ಯಾಪಕ ಅರಿವು ಮೂಡಿಸಬೇಕು. ಜೊತೆಗೆ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಜೀವರಕ್ಷಕ ಔಷಧಗಳ ದಾಸ್ತಾನು ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಹಾವು ಕಡಿತ ಆಡಿಟ್, ರಾಷ್ಟ್ರೀಯ ರೇಬಿಸ್ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇಶನ ನೀಡಿದರು.
ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎ.ಎಚ್.ಸುನೀಲ್ ಅರ್ಜಿ
ಹಾವು ಅಥವಾ ನಾಯಿ ಕಚ್ಚಿದಾಗ ಜನರು ಆತಂಕಕ್ಕೊಳಗಾಗಿ ನಾಟಿ ವೈದ್ಯರ ಮೊರೆ ಹೋಗಬಾರದು. ಬದಲಾಗಿ ತಕ್ಷಣವೇ ಸೂಕ್ತ ಪ್ರಥಮ ಚಿಕಿತ್ಸೆ ಪಡೆದು, ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ವೈಜ್ಞಾನಿಕ ಚಿಕಿತ್ಸೆ ಪಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿ-ವೆನಮ್ ಸೇರಿದಂತೆ ಅಗತ್ಯ ಔಷಧಗಳು ಸದಾ ಲಭ್ಯವಿರುವಂತೆ ನೋಡಿಕೊಳ್ಳುವುದು ವೈದ್ಯಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಡಿಸಿ ತಿಳಿಸಿದರು.
Snake & Dog Bites ಶ್ವಾನ ಕಡಿತದಲ್ಲಿ ಭದ್ರಾವತಿಗೆ ಮೊದಲ ಸ್ಥಾನ
ಜಿಲ್ಲೆಯಾದ್ಯಂತ ಒಟ್ಟು 13,325 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಭದ್ರಾವತಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 3,157 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಉಳಿದಂತೆ ಶಿವಮೊಗ್ಗ 2,910, ಸಾಗರ 2,287, ಶಿಕಾರಿಪುರ 1,583, ಸೊರಬ 1,360, ತೀರ್ಥಹಳ್ಳಿ 1,023 ಹಾಗೂ ಹೊಸನಗರದಲ್ಲಿ 1,005 ಪ್ರಕರಣಗಳು ಕಂಡುಬಂದಿವೆ.
Snake & Dog Bites ಹಾವು ಕಡಿತ: ಶಿಕಾರಿಪುರ ಫಸ್ಟ್, ಸಾಗರದಲ್ಲಿ ಹೆಚ್ಚು ಸಾವು
ಜಿಲ್ಲೆಯಲ್ಲಿ 606 ಹಾವು ಕಡಿತ ಪ್ರಕರಣಗಳು ದೃಢಪಟ್ಟಿದ್ದು, ದುರದೃಷ್ಟವಶಾತ್ 6 ಜನ ಬಲಿಯಾಗಿದ್ದಾರೆ. ಶಿಕಾರಿಪುರ ತಾಲೂಕಿನಲ್ಲಿ ಗರಿಷ್ಠ 141 ಪ್ರಕರಣಗಳು (1 ಸಾವು) ವರದಿಯಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಶಿವಮೊಗ್ಗದಲ್ಲಿ 122, ಭದ್ರಾವತಿಯಲ್ಲಿ 113, ಸೊರಬದಲ್ಲಿ 72 ಪ್ರಕರಣಗಳು ದಾಖಲಾಗಿವೆ. ಹೊಸನಗರದಲ್ಲಿ 64 (1 ಸಾವು), ತೀರ್ಥಹಳ್ಳಿ 49, ಹಾಗೂ ಸಾಗರದಲ್ಲಿ 45 ಪ್ರಕರಣಗಳು ಪತ್ತೆಯಾಗಿದ್ದರೂ, ಸಾಗರದಲ್ಲಿ ಅತಿ ಹೆಚ್ಚು ಅಂದರೆ 4 ಮಂದಿ ಮೃತಪಟ್ಟಿದ್ದಾರೆ.
ವ್ಯಕ್ತಿಗೆ ಹಾವು ಕಚ್ಚಿದ ತಕ್ಷಣ ಭಯಭೀತರಾಗದಂತೆ ಧೈರ್ಯ ತುಂಬಬೇಕು. ಕಡಿತಕ್ಕೊಳಗಾದ ಅಂಗವನ್ನು ಅಲುಗಾಡಿಸದಂತೆ ಮಲಗಿಸಿ, ಶೀಘ್ರವೇ ಆಸ್ಪತ್ರೆಗೆ ದಾಖಲಿಸಬೇಕು. ಗಾಯದ ಭಾಗಕ್ಕೆ ಬಿಗಿಯಾದ ಬಟ್ಟೆ ಕಟ್ಟುವುದು, ಬ್ಲೇಡ್ನಿಂದ ಕತ್ತರಿಸುವುದು, ಬಾಯಿಂದ ವಿಷ ಹೀರಲು ಯತ್ನಿಸುವುದು ಅಥವಾ ಮೂಢನಂಬಿಕೆ ಆಧಾರಿತ ನಾಟಿ ಔಷಧಿ ಮಾಡಿಸುವುದು ಪ್ರಾಣಕ್ಕೆ ಕುತ್ತು ತರಬಹುದು ಎಂದು ಎಚ್ಚರಿಸಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ 102 ಇಲಿಜ್ವರ
ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರಿಗೂ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಡಿಹೆಚ್ಓ ಡಾ. ನಟರಾಜ್, ಸೇರಿದಂತೆ ಹಲವು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
