Sahyadri Narayana Hospital / ಮಲೆನಾಡು ಟುಡೆ / ಶಿವಮೊಗ್ಗ / ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯನ್ನು ಬಾಧಿಸಿದ್ದ ಅಪರೂಪದ ಕಾಯಿಲೆಗೆ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪರಿಹಾರ ಒದಗಿಸಿದೆ. ಈ ಬಗ್ಗೆ ಆಸ್ಪತ್ರೆಯ ನರರೋಗ ತಜ್ಞೆ ಡಾ. ಕೆ.ಎಂ. ಹಂಸರವರು ಖುದ್ದಾಗಿ ವಿವರಿಸಿದ ವರದಿ ಹೀಗಿದೆ.
ಕಡೂರು ತಾಲ್ಲೂಕಿನ ನಿವಾಸಿಯಾದ 65 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ ಅಂದು ಎಂದಿನಂತೆ ಒಂದು ಸಾಧಾರಣ ದಿನವಾಗಿತ್ತು. ಎಂದಿನಂತೆ ರಾತ್ರಿ ಊಟ ಮುಗಿಸಿಕೊಂಡು ನಿದ್ದೆಗೆ ಜಾರಿದ್ದರು. ಆದರೆ, ಮರುದಿನ ಎಷ್ಟೇ ಹೊತ್ತಾದರೂ ನಿದ್ರೆಯಿಂದ ಏಳಲಿಲ್ಲ. ಬಲವಂತವಾಗಿ ಎಬ್ಬಿಸಲು ಪ್ರಯತ್ನಿಸಿದರೂ ಅವರ ಕಡೆಯಿಂದ ಪ್ರತಿಕ್ರಿಯೆ ಇರಲಿಲ್ಲ, ಕೇವಲ ಅಸ್ಪಷ್ಟ ಶಬ್ದ ಮಾತ್ರ ಬಾಯಿಂದ ಹೊರಬರುತ್ತಿದ್ದವು. ಇದನ್ನು ಕಂಡು ಗಾಬರಿಯಾದ ಕುಟುಂಬಸ್ಥರಿಗೆ ಯಾವುದೋ ವಿಷದ ಪರಿಣಾಮವೋ ಅಥವಾ ಬೇರೆ ರೀತಿಯ ಆರೋಗ್ಯ ಸಮಸ್ಯೆಯೋ ಎಂಬ ಅನುಮಾನ ಶುರುವಾಯಿತು.
ಹೇಗಾದರೂ ಮಾಡಿ ಎಬ್ಬಿಸಲೇಬೇಕೆಂದುಕೊಂಡು ಪ್ರಯತ್ನಗಳನ್ನು ಮಾಡುವುದರಲ್ಲಿಯೇ ಕುಟುಂಬಸ್ಥರು ಟೈಂ ಕಳೆದಿದ್ದರು. ಇದರಿಂದ ಪರಿಸ್ಥಿತಿ ಕೈ ಮೀರುವ ಹಂತದಲ್ಲಿತ್ತು. ಅಷ್ಟೊತ್ತಿಗೆ ಏನೋ ಆಗಿದೆ ಎಂದು ಅಲರ್ಟ್ ಆದ ಕುಟುಂಬಸ್ಥರು, ಸಂತ್ರಸ್ತರನ್ನ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆತಂದು ಆಡ್ಮಿಟ್ ಮಾಡಿದ್ರು. ಆಸ್ಪತ್ರೆಗೆ ಬಂದು ತಲುಪಿದ ತಕ್ಷಣವೇ ಅಲ್ಲಿನ ನರರೋಗ ತಜ್ಞರಾದ ಡಾ. ಹಂಸ ಕೆ.ಎಂ. ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದಾಗ ಸತ್ಯ ಹೊರಬಿದ್ದಿತು. ಆ ವೃದ್ಧರಿಗೆ ‘ಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ನ್’ ಎಂಬ ಅತ್ಯಂತ ಅಪರೂಪದ ಸ್ಟೋಕ್ ಅಥವಾ ಪಾರ್ಶ್ವವಾಯು ಸಂಭವಿಸಿದೆ ಎಂಬುದು ಗೊತ್ತಾಗಿತ್ತು. ಈ ಕಾರಣಕ್ಕೆ ಮೆದುಳಿನ ಎಚ್ಚರಗೊಳಿಸುವ ಪ್ರಮುಖ ವ್ಯವಸ್ಥೆಗೆ ಭಾರೀ ಪೆಟ್ಟು ಬಿದ್ದು, ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.
ಈ ನಡುವೆ ಪಾರ್ಶ್ವವಾಯು ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ‘ಗೋಲ್ಡನ್ ಅವರ್’ ಅಂದರೆ ನಾಲ್ಕೂವರೆ ಗಂಟೆಗಳ ಅಮೂಲ್ಯ ಸಮಯ ಈಗಾಗಲೇ ಮೀರಿ ಹೋಗಿತ್ತು. ಅಲ್ಲದೆ ರೋಗಿಯ ಸ್ಥಿತಿ ಗಂಭೀರವಾಗತ್ತು. ಆದರೂ ಪ್ರಯತ್ನ ಬಿಡದ ವೈದ್ಯರು ಉಸಿರಾಟದ ತೊಂದರೆಯಾಗದಂತೆ ತಕ್ಷಣವೇ ಅವರನ್ನು ವೆಂಟಿಲೇಟರ್‌ನಲ್ಲಿರಿಸಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆಯನ್ನು ಶುರು ಮಾಡಿದ್ರು. ಮೆದುಳಿನ ಊತ ಕಡಿಮೆ ಮಾಡುವ ಹಾಗೂ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಔಷಧ ನೀಡಿ ಎಚ್ಚರಿಕೆಯಿಂದ ಆರೈಕೆಯನ್ನು ಮಾಡಿದ್ರು.
ಈ ಪ್ರಯತ್ನಗಳಿಂದಾಗಿ ಕೇವಲ 48 ಗಂಟೆಗಳಲ್ಲಿ ರೋಗಿಯ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂತು. ಕೂಡಲೇ ವೆಂಟಿಲೇಟರ್ ತೆಗೆದು ಹಾಕಿ, ರೋಗಿಗೆ ಉಸಿರಾಟದ ಮತ್ತು ದೇಹದ ಸಮತೋಲನ ಕಾಯ್ದುಕೊಳ್ಳುವ ವಿಶೇಷ ವ್ಯಾಯಾಮಗಳನ್ನು ಮಾಡಿಸಿದ್ರು. ಆಸ್ಪತ್ರೆಗೆ ದಾಖಲಾದ ಕೇವಲ ನಾಲ್ಕೇ ದಿನಗಳಲ್ಲಿ ಅವರು ಇತರರ ಅಥವಾ ಯಾವುದೇ ಸಹಾಯವಿಲ್ಲದೆ ತಮ್ಮಷ್ಟಕ್ಕೆ ತಾವೇ ಸ್ವತಃ ನಡೆದಾಡುವಷ್ಟು ಗುಣಮುಖರಾಗಿ ಮನೆಗೆ ಮರಳಿದರು.
ಈ ಬಗ್ಗೆ ವಿವರಿಸವು ಡಾ. ಹಂಸ ಕೆಎಂ, ಮೆದುಳಿಗೆ ರಕ್ತವನ್ನು ಪೂರೈಸಲು ಎರಡು ಪ್ರತ್ಯೇಕ ರಕ್ತನಾಳಗಳಿರುತ್ತವೆ. ಆದರೆ ಶೇಕಡಾ 4 ರಿಂದ 12 ರಷ್ಟು ಜನರಲ್ಲಿ ಮಾತ್ರ ಎರಡೂ ಕಡೆಗೆ ರಕ್ತ ಪೂರೈಸಲು ಒಂದೇ ಒಂದು ರಕ್ತನಾಳವಿರುತ್ತದೆ. ಆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಬ್ಲಾಕ್ ಆದಾಗ, ಮೆದುಳಿನ ಎರಡೂ ಭಾಗಗಳಿಗೆ ರಕ್ತ ಪೂರೈಕೆ ಒಮ್ಮೇಲೆ ನಿಂತುಹೋಗಿ, ಮನುಷ್ಯ ಹಠಾತ್ತನೆ ದೀರ್ಘ ನಿದ್ದೆಗೆ ಅಥವಾ ಕೋಮಾಕ್ಕೆ ಜಾರುತ್ತಾನೆ. ಸಾಮಾನ್ಯ ಸ್ಟೋಕ್‌ನಂತೆ ಇದರಲ್ಲಿ ಮುಖ ಸೊಟ್ಟಗಾಗುವುದು, ಕೈಕಾಲು ಸ್ವಾಧೀನ ಕಳೆದುಕೊಳ್ಳುವುದು ಅಥವಾ ಮಾತು ತೊದಲುವ ಯಾವುದೇ ಲಕ್ಷಣಗಳಿರುವುದಿಲ್ಲ. ಹಾಗಾಗಿಯೇ, ಈ ರೀತಿಯ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚುವುದು ಸವಾಲಿನ ಸಂಗತಿ. ಮನೆಯವರು ಇದನ್ನು ಅತಿಯಾದ ಆಯಾಸದ ನಿದ್ದೆ ಎಂದೋ ಅಥವಾ ಬೇರೆಯದ್ದೇ ಸಮಸ್ಯೆ ಎಂದೋ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ ಎನ್ನುತ್ತಾರೆ.
ಮಲಗಿರುವ ವ್ಯಕ್ತಿಯನ್ನು ಎಬ್ಬಿಸಿದಾಗ ಏಳದಿದ್ದರೆ ಮತ್ತು ಅದರ ಜೊತೆಗೆ ಉಸಿರಾಟದಲ್ಲಿ ಏರುಪೇರು ಕಂಡುಬಂದರೆ, ಬಾಯಲ್ಲಿ ಜೊಲ್ಲು ಸುರಿಯುವುದು ಅಥವಾ ಪ್ರಜ್ಞೆ ತಪ್ಪಿದಂತೆ ಕಂಡು ಬಂದರೆ, ದಯವಿಟ್ಟು ಯಾರೂ ಕೂಡ ನಿರ್ಲಕ್ಷ್ಯ ಮಾಡಬೇಡಿ. ಅದನ್ನು ಅತ್ಯಂತ ತುರ್ತು ವೈದ್ಯಕೀಯ ಪರಿಸ್ಥಿತಿ ಎಂದು ಪರಿಗಣಿಸಿ, ಯಾವುದೇ ಕಾಲಹರಣ ಮಾಡದೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆತನ್ನಿ. ಸರಿಯಾದ ಸಮಯಕ್ಕೆ ಸಿಗುವ ಸೂಕ್ತ ಚಿಕಿತ್ಸೆಯು ಎಂತಹ ಅಪರೂಪದ ಸ್ಟೋಕ್‌ನಿಂದಲೂ ವ್ಯಕ್ತಿಯನ್ನು ಖಂಡಿತವಾಗಿ ಪಾರುಮಾಡಬಲ್ಲದು’ ಎಂದು ಡಾ. ಕೆ.ಎಂ. ಹಂಸ ಜನರಲ್ಲಿ ಮನವಿಯನ್ನ ಸಹ ಮಾಡಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
