SHIVAMOGGA NEWS TODAY

6 ತಿಂಗಳಿನಲ್ಲಿ 111 ಮಕ್ಕಳು ಕಾಣೆ, ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ಮಹತ್ವದ ಸಲಹೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

shivamogga sp nikil b ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಯಾವುದೆ ಮಗು ಕಾಣೆಯಾದ ತಕ್ಷಣ ಯಾವುದೇ ತಡ ಮಾಡದೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಪಡೆದು, ತಕ್ಷಣ ಎಫ್‌ಐಆರ್ ದಾಖಲಿಸಿಕೊಳ್ಳಬೇಕು, ಇದರಿಂದ ಪ್ರಾಥಮಿಕ ಪ್ರಯತ್ನದಲ್ಲೇ ಮಗುವನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ (shivamogga-sp-nikil-b) ಅವರು ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ನಿನ್ನೆ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಾಣೆಯಾದ ಮಕ್ಕಳ ಪತ್ತೆ ಹಚ್ಚುವ ವಿಶೇಷ ಕಾರ್ಯಪಡೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಾ ಈ ಮಾತನ್ನ ಹೇಳಿದ್ದಾರೆ.

ಮಗು ಕಾಣೆಯಾದ ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡು ಕಾರ್ಯೋನ್ಮುಖರಾಗಬೇಕು, ವಿಳಂಬ ಆದರೆ ಪತ್ತೆ ಹಚ್ಚುವುದು ಕಷ್ಟ. ಮಗು ಕಾಣೆಯಾದ ತಕ್ಷಣವೇ ಆದ್ಯತೆಯ ಮೇರೆಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ಪಡೆಯನ್ನು ರಚಿಸಬೇಕು ಎಂದು ಅವರು ಸೂಚಿಸಿದರು.

  • ಕಾಣೆಯಾದ ಮಗುವಿನ ಭಾವಚಿತ್ರ ಮತ್ತು ವಿವರಗಳನ್ನು ರಾಜ್ಯ ಹಾಗೂ ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ತಕ್ಷಣವೇ ರವಾನಿಸಬೇಕು. ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ಮೊದಲ 24 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ನಿರ್ದೇಶನ ನೀಡಿದರು.
  • ಇದೇ ವೆಳೆ ಜಿಲ್ಲೆಯ ಪ್ರತಿ ಠಾಣೆಯ ಪೇದೆಗಳು ಹಾಗೂ ಅಧಿಕಾರಿಗಳಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಸೂಚಿಸಲಾಗಿದ್ದು, ಪೇದೆಗಳು ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಈ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸಿದ ಎರಡು ತಿಂಗಳ ನಂತರ ಆ ಮಕ್ಕಳು ಶಾಲೆಗೆ ನಿರಂತರವಾಗಿ ಬರುತ್ತಿದ್ದಾರಾ ಎಂದು ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

ಅಂಕಿ ಅಂಶಗಳು

2026 ರ ಜನವರಿಯಿಂದ ಜೂನ್ ವರೆಗಿನ ಅವಧಿಯಲ್ಲಿ ಜಿಲ್ಲಾದ್ಯಂತ ಒಟ್ಟು 111 ಮಕ್ಕಳು ಕಾಣೆಯಾಗಿದ್ದು, ಈ ಪೈಕಿ ಯಶಸ್ವಿಯಾಗಿ 100 ಮಕ್ಕಳನ್ನು (ಶೇಕಡಾ 90 ಕ್ಕೂ ಹೆಚ್ಚು) ಪತ್ತೆ ಹಚ್ಚಲಾಗಿದೆ. ಕಾಣೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 98 ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಸ್ತುತ 11 ಮಕ್ಕಳು ಪತ್ತೆಯಾಗಬೇಕಿದ್ದು, ಕಾರ್ಯಪಡೆಯು ಶೋಧ ಕಾರ್ಯ ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದ್ರು.

ಬಾಲ್ಯ ವಿವಾಹ ಪ್ರಕರಣಗಳಿಗೆ ಒಳಗಾಗಿ ಪತ್ತೆಯಾಗಿರುವ ಮಕ್ಕಳ ಸಂಖ್ಯೆ 34, ಮಾನವ ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಕ್ಕಳು 19 ಮತ್ತು ಚಾರ್ಜ್ ಶೀಟ್ ಸಲ್ಲಿಸಲಾದ 24 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ ಅವರು, ಜೆಜೆ ಕಾಯ್ದೆಯಡಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಯಾದ ಸಮಯಕ್ಕೆ ನೋಟಿಸ್ ನೀಡುವ ಕೆಲಸ ಆಗಬೇಕು ಎಂದರು.

ಕಾಣೆಯಾದ ಮಕ್ಕಳ ಪ್ರಕರಣದಲ್ಲಿ ತಕ್ಷಣ ಎಫ್‌ಐಆರ್ ಮಾಡಿಕೊಳ್ಳಬೇಕು. ಈ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರಾಥಮಿಕ ವಿಚಾರಣೆ ಅಗತ್ಯವಿಲ್ಲ, ಆದ್ದರಿಂದ ತಕ್ಷಣ ಕ್ರಮ ವಹಿಸಬೇಕು ಎಂದರು. ಕಮ್ಯುನಿಟಿ ಮೀಡಿಯೇಷನ್ ಮೂಲಕ ಕೌಟುಂಬಿಕ ಹಾಗೂ ಇತರೆ ಸಣ್ಣಪುಟ್ಟ ವಿವಾದಗಳು, ಜಗಳಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಕೋರ್ಟ್ ಮೆಟ್ಟಿಲೇರದೆ, ಪರಸ್ಪರ ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾಗಿದೆ. ಇದರಿಂದ ಕೋರ್ಟ್ ಪ್ರಕರಣ ಕಡಿತಗೊಳಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳಬಹುದು

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್, ಡಿಡಿಪಿಐ ಎಸ್.ಆರ್. ಮಂಜುನಾಥ್, ಡಿವೈಎಸ್ಪಿ ಸಂಜೀವ್ ಕುಮಾರ್, ಪೊಲೀಸ್ ಹಾಗೂ ಇತರೆ ಅಧಿಕಾರಿಗಳು, ನೌಕರರು ಹಾಜರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY