Good Samaritan / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರಿಗೆ ಗುಡ್ ಸಮರಿಟನ್ (Good Samaritan) ಅಂದರೆ ಜೀವರಕ್ಷಕ ಎಂದು ಗೌರವಿಸಲಾಗಿದೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಾದಚಾರಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಮಾನವೀಯ ಕಾರ್ಯಕ್ಕಾಗಿ ಈ ಗೌರವವನ್ನು ನೀಡಾಲಾಗಿದೆ.
ಏನಿದು ವಿಚಾರ
ದಿನಾಂಕ 01-07-2026 ರಂದು ರಾತ್ರಿ ಸುಮಾರು 9.30 ಗಂಟೆಗೆ ಕುವೆಂಪು ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಎದುರು ರಸ್ತೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಪಾದಚಾರಿ ಗಿರೀಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅಲ್ಲಿಯೇ ಹೋಗುತ್ತಿದ್ದ ಉಪನ್ಯಾಸಕ ಸುಬ್ರಮಣ್ಯಂ ಬಿಟ್ಟು ಎಂಬವರು ಗಿರೀಶ್ ಅವರನ್ನು ತಮ್ಮ ಕಾರಿನಲ್ಲಿ ಮೆಟ್ರೋ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ದೊರೆಯುವಂತೆ ಮಾಡಿದ್ದರು. ಅವರ ಮಾನವೀಯ ಕೆಲಸಕ್ಕೆ ಈ ಗೌರವವನ್ನು ನೀಡಲಾಗಿದೆ.
ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ನಗರ ಸಂಚಾರ ಪೊಲೀಸ್ ವಿಭಾಗ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಹಾಕಿದ್ದು, ಸಮಯಪ್ರಜ್ಞೆ ಮೆರೆದು ಜೀವ ಉಳಿಸಿದ ಸರ್ ಎಂ.ವಿ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಮಣ್ಯಂ ಬಿಟ್ಟು ಅವರನ್ನು ಗುಡ್ ಸಮರಿಟನ್ ಅಂದರೆ ಜೀವರಕ್ಷಕ ಎಂದು ಗುರುತಿಸಿ ಗೌರವ ಸಲ್ಲಿಸಿದೆ.
ಅಪಘಾತದ ಸಂದರ್ಭದಲ್ಲಿ ಯಾರು ನೆರವಿಗೆ ಬರುತ್ತಾರೋ ಎನ್ನುವ ಆತಂಕದ ನಡುವೆ, ತಾವೇ ಖುದ್ದಾಗಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಸುಬ್ರಮಣ್ಯಂ ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಶಿವಮೊಗ್ಗ ಸಂಚಾರಿ ಪೊಲೀಸರು ಪ್ರಶಂಸಿಸಿದ್ದಾರೆ.
