Shivamogga ಶಿವಮೊಗ್ಗ : ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ಭದ್ರತೆ, ಸುರಕ್ಷತೆ ಮತ್ತು ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧೀನ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಶಿವಮೊಗ್ಗ; ಪ್ರತಿ ಲೀಟರ್ ಹಾಲಿಗೆ 20 ಬೆಂಬಲ ಬೆಲೆಗೆ ಆಗ್ರಹಿಸಿ ಮುಂದಿನ ವಾರ ಪ್ರತಿಭಟನೆ!
ಜಿಲ್ಲೆಯ ನದಿಗಳು, ಜಲಪಾತಗಳು, ಅಣೆಕಟ್ಟುಗಳು, ಹಿನ್ನೀರು, ಗುಡ್ಡಗಾಡು ಅರಣ್ಯ ಪ್ರದೇಶಗಳು ಹಾಗೂ ಟ್ರೆಕ್ಕಿಂಗ್ ಸ್ಥಳಗಳಿಗೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನದಿ ತೀರಗಳಲ್ಲಿ ನೀರಿನ ಮಟ್ಟ ಏರಿಕೆ, ಗುಡ್ಡ ಕುಸಿತ, ಮರ ಬೀಳುವಿಕೆ ಹಾಗೂ ಜಾರಿ ಬೀಳುವ ಅಪಾಯಗಳಿರುವುದರಿಂದ ಜೀವ ರಕ್ಷಣೆಯ ದೃಷ್ಟಿಯಿಂದ ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಜಂಟಿಯಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಎಚ್ಚರಿಕೆ ಫಲಕಗಳ ಅಳವಡಿಕೆ: ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಅಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಪಾಯ ಪ್ರದೇಶ, ನೀರಿನಲ್ಲಿ ಇಳಿಯಬೇಡಿ, ಸೆಲ್ಫಿ ತೆಗೆಯುವುದು ಅಪಾಯಕಾರಿ ಹಾಗೂ ಪ್ರವೇಶ ನಿಷೇಧಿತ ಪ್ರದೇಶ ಎಂಬ ಎಚ್ಚರಿಕೆಯ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.
ಬ್ಯಾರಿಕೇಡ್ ಹಾಗೂ ರಕ್ಷಣಾ ಬೇಲಿ: ಜಲಪಾತಗಳ ಅಂಚು, ಆಳವಾದ ನೀರಿನ ಪ್ರದೇಶಗಳು ಮತ್ತು ಜಾರಿ ಬೀಳುವ ಸಾಧ್ಯತೆ ಇರುವ ವೀಕ್ಷಣಾ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಗೂ ಸುರಕ್ಷತಾ ಬೇಲಿಗಳನ್ನು ನಿರ್ಮಿಸಬೇಕು.
ಕಟ್ಟುನಿಟ್ಟಿನ ನಿಷೇಧ: ಪ್ರವಾಸಿಗರು ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸುವುದು, ಈಜುವುದು, ಅಪಾಯಕಾರಿ ಸೆಲ್ಫಿ/ರೀಲ್ಸ್ ಮಾಡುವುದು ಹಾಗೂ ಮದ್ಯಪಾನ ಮಾಡಿ ಪ್ರವಾಸಿ ಸ್ಥಳಗಳಿಗೆ ಬರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹೆಚ್ಚುವರಿ ಭದ್ರತೆ: ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಪೊಲೀಸ್, ಹೋಂ ಗಾರ್ಡ್ ಹಾಗೂ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಅಲರ್ಟ್ ಘೋಷಣೆಯಾದಾಗ ಪ್ರವೇಶ ಬಂದ್: ಹವಾಮಾನ ಇಲಾಖೆಯು ‘ಆರೆಂಜ್’ ಅಥವಾ ‘ರೆಡ್’ ಅಲರ್ಟ್ ನೀಡಿದ ಸಂದರ್ಭದಲ್ಲಿ ಜಲಪಾತಗಳು ಮತ್ತು ಟ್ರೆಕ್ಕಿಂಗ್ ಮಾರ್ಗಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅನಧಿಕೃತ ಟ್ರೆಕ್ಕಿಂಗ್ ಹಾಗೂ ಕ್ಯಾಂಪಿಂಗ್ ಮಾಡುವಂತಿಲ್ಲ.
ರಕ್ಷಣಾ ತಂಡಗಳು: ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ರಕ್ಷಣಾ ಸಲಕರಣೆಗಳೊಂದಿಗೆ ತುರ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗುವುದು. ಜಲಾವೃತ ಪ್ರದೇಶಗಳಲ್ಲಿ ಲೈಫ್ ಜಾಕೆಟ್ ಹಾಗೂ ತರಬೇತಿ ಪಡೆದ ಸಿಬ್ಬಂದಿ ಕಡ್ಡಾಯವಾಗಿ ಇರಲಿದ್ದಾರೆ.
ಆರೋಗ್ಯ ಇಲಾಖೆಯಿಂದ ಪ್ರವಾಸಿ ತಾಣಗಳ ಬಳಿ ಪ್ರಥಮ ಚಿಕಿತ್ಸೆ, ತುರ್ತು ವೈದ್ಯಕೀಯ ನೆರವು ಹಾಗೂ ಆಂಬ್ಯುಲೆನ್ಸ್ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಅಗತ್ಯವಿರುವ ಪ್ರವಾಸಿ ತಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವಿಸಿಟರ್ಸ್ ರಿಜಿಸ್ಟರ್, ಪಬ್ಲಿಕ್ ಅನೌನ್ಸ್ಮೆಂಟ್ ಸಿಸ್ಟಮ್ ಹಾಗೂ ಕ್ಯುಆರ್ ಕೋಡ್ ಆಧಾರಿತ ತುರ್ತು ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಶೌಚಾಲಯ, ತ್ಯಾಜ್ಯ ನಿರ್ವಹಣೆ ಮತ್ತು ವಾಹನ ನಿಲುಗಡೆ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು. ರಸ್ತೆಗಳಲ್ಲಿನ ಗುಂಡಿ ಬಿದ್ದಿರುವ ಜಾಗ ಮತ್ತು ಭೂಕುಸಿತದ ಅಪಾಯವಿರುವ ಸ್ಥಳಗಳನ್ನು ತಕ್ಷಣ ಸರಿಪಡಿಸಬೇಕು.
ವಿಶೇಷ ಸೂಚನೆ: ಹೋಂಸ್ಟೇ, ರೆಸಾರ್ಟ್ ಹಾಗೂ ಟ್ರಾವೆಲ್ ಏಜೆನ್ಸಿಗಳು ಪ್ರವಾಸಿಗರಿಗೆ ಮಳೆಗಾಲದ ಸುರಕ್ಷತಾ ನಿಯಮಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ರಾತ್ರಿ ಸಮಯದಲ್ಲಿ ಅಪಾಯಕಾರಿ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಪೊಲೀಸ್, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಸೇರಿದಂತೆ ತುರ್ತು ದೂರವಾಣಿ ಸಂಖ್ಯೆಗಳನ್ನು ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.