ಮಹಾರಾಷ್ಟ್ರದಲ್ಲಿ ವಶಪಡಿಸಿಕೊಂಡಿದ್ದ 50 ಅಡಿಕೆ ಲಾರಿಗಳ ಬಿಡುಗಡೆಗೆ ಸಿಎಂ ಫಡ್ನವೀಸ್ ಗ್ರೀನ್​ ಸಿಗ್ನಲ್​​: ಆರಗ ಜ್ಞಾನೇಂದ್ರ

ಹಂಚಿಕೊಳ್ಳಿ
WhatsApp Facebook X Telegram
CM Fadnavis Clears 50 Karnataka Arecanut Trucks
CM Fadnavis Clears 50 Karnataka Arecanut Trucks

CM Fadnavis ಶಿವಮೊಗ್ಗ: ಕರ್ನಾಟಕದಿಂದ ವಿವಿಧ ರಾಜ್ಯಗಳಿಗೆ ಸಾಗಣೆಯಾಗುತ್ತಿದ್ದ ವೇಳೆ ಮಹಾರಾಷ್ಟ್ರ ಅಧಿಕಾರಿಗಳಿಂದ ಜಪ್ತಿಯಾಗಿದ್ದ ಸುಮಾರು 50 ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ: ತಾಯಿ ಹಾಗೂ ಮಕ್ಕಳ ವಿರುದ್ಧ ಪೊಲೀಸರಿಗೆ ತಂದೆಯ ದೂರು, ಕಾರಣವೇನು?

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಸಂಪೂರ್ಣ ವಿವರ ಹಾಗೂ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ಕರ್ನಾಟಕದಿಂದ ದೆಹಲಿ, ಲಕ್ನೋ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಡಿಕೆ ಸಾಗಿಸುತ್ತಿದ್ದ ವೇಳೆ ಮಹಾರಾಷ್ಟ್ರದ ಅಧಿಕಾರಿಗಳು ವಿವಿಧ ನೆಪಗಳನ್ನು ಒಡ್ಡಿ ಸುಮಾರು 50 ಲಾರಿಗಳನ್ನು ವಶಪಡಿಸಿಕೊಂಡಿದ್ದರು. ಈ ಸಮಸ್ಯೆಯ ನಿವಾರಣೆಗಾಗಿ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ನಿಯಮಿತದ ವತಿಯಿಂದ ತುರ್ತು ಸಭೆ ಹಮ್ಮಿಕೊಳ್ಳಲಾಗಿತ್ತು. ಅದರ ಮುಂದುವರಿದ ಭಾಗವಾಗಿ, ಜುಲೈ 7 ರಂದು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ನಿಯೋಗ ಭೇಟಿಯಾಗಿ ಮಹತ್ವದ ಸಭೆ ನಡೆಸಿತು ಎಂದರು.

ಸಭೆಯಲ್ಲಿ ಸಿಎಂ ಫಡ್ನವೀಸ್ ಅವರಿಗೆ ಅಡಿಕೆ ಬೆಳೆಯ ಪ್ರಯೋಜನಗಳು, ತೆರಿಗೆ ಪಾವತಿಯ ವಿವರ ಹಾಗೂ ಅಡಿಕೆ ನಂಬಿ ಬದುಕುತ್ತಿರುವ ರೈತರ ಜೀವನದ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡಲಾಯಿತು. ನಮ್ಮ ಅಡಿಕೆ ಕಾನೂನುಬದ್ಧವಾಗಿಯೇ ಬೇರೆ ರಾಜ್ಯಗಳಿಗೆ ಪೂರೈಕೆಯಾಗುತ್ತಿದ್ದು, ಮಹಾರಾಷ್ಟ್ರ ಅಧಿಕಾರಿಗಳಿಗೆ ಇದರಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆವು. ಇದನ್ನು ಗಮನಿಸಿದ ಸಿಎಂ ಫಡ್ನವೀಸ್ ಅವರು, ಇನ್ಮುಂದೆ ಕರ್ನಾಟಕದಿಂದ ಬರುವ ಯಾವುದೇ ಅಡಿಕೆ ಲಾರಿಯನ್ನು ತಡೆಯಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆಎಂದು ಆರಗ ಜ್ಞಾನೇಂದ್ರ ವಿವರಿಸಿದರು.

ಒಂದು ವೇಳೆ ಮುಂದೆ ಈ ರೀತಿಯ ಸಮಸ್ಯೆಗಳೇನಾದರೂ ಎದುರಾದರೆ, ಮಾಜಿ ಐಎಎಸ್ ಅಧಿಕಾರಿ ಲೋಕೇಶ್ ಚಂದ್ರ ಅವರನ್ನು ಸಂಪರ್ಕಿಸುವಂತೆ ಮುಖ್ಯಮಂತ್ರಿಗಳು ನಿಯೋಗಕ್ಕೆ ತಿಳಿಸಿದ್ದಾರೆ. ಸದ್ಯ ವಶದಲ್ಲಿರುವ ಲಾರಿಗಳು ಯಾವ ಹಂತದಲ್ಲಿವೆ, ಎಫ್‌ಐಆರ್ ದಾಖಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಶೀಘ್ರದಲ್ಲೇ ಲಾರಿಗಳನ್ನು ಬಿಡುಗಡೆಗೊಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಅಡಿಕೆ ಬೆಳೆಗಾರರು, ವ್ಯಾಪಾರಸ್ಥರು, ಸಹಕಾರ ಸಂಘಗಳು ಹಾಗೂ ಸಾಗಾಣಿಕೆದಾರರು ನಿಟ್ಟುಸಿರು ಬಿಡುವಂತಾಗಿದೆ.

ದೆಹಲಿಯ ಸಭೆಯಲ್ಲಿ ಮತ್ತು ನಿಯೋಗದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಂಸದರಾದ ಬಿ.ವೈ. ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಸ್ಕೋಸ್ ಉಪಾಧ್ಯಕ್ಷ ಮಹೇಶ್ ಹೆಚ್.ಎಸ್., ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ, ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಹಾಗೂ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್ ಹೆಚ್.ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಡಿಕೆ ಮಹಾಮಂಡಳದ ನಿಯೋಗಕ್ಕೆ ಸಂಪೂರ್ಣ ಸಹಕಾರ ನೀಡಿದ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಈ ವಿಷಯದಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ, ರಾಜ್ಯದ ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಸ್ಥರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor