SHIVAMOGGA NEWS TODAY

ಸಹಾಯ ಕೇಂದ್ರಗಳ ಮೇಲೆ ರಾಜಕೀಯ ಸಂಶಯ ಬೇಡ: ಶಿವಮೊಗ್ಗದಲ್ಲಿ ಮುಸ್ಲಿಂ ಸಂಘಟನೆಗಳ ಆಗ್ರಹ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shimoga ಶಿವಮೊಗ್ಗ: ಭಾರತದ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮೂಡಿಸಿದೆ. ಇದರ ನಡುವೆ, ರಾಜಕೀಯ ನಾಯಕರು ಧರ್ಮಗಳ ಆಧಾರದ ಮೇಲೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂರಕ್ಷಣಾ ವೇದಿಕೆ ಹಾಗೂ ಶಿವಮೊಗ್ಗದ ಪೀಸ್ ಆರ್ಗನೈಸೇಷನ್ ತೀವ್ರ ಆಗ್ರಹ ಮಾಡಿವೆ.

ನಗರದ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ರಿಯಾಜ್​​ ಅಹ್ಮದ್​​ ಮಾತನಾಡಿ, ಭಾರತದ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಬಿಎಲ್‌ಒ (BLO) ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹೆಚ್ಚಿನ ಬಿಎಲ್‌ಒ ಅಧಿಕಾರಿಗಳಿಗೆ ಅರ್ಜಿ ಫಾರಂಗಳನ್ನು ಹೇಗೆ ಭರ್ತಿ ಮಾಡಬೇಕೆಂಬ ಜ್ಞಾನವೂ ಇಲ್ಲ. ಇದರಿಂದಾಗಿ ಸಾರ್ವಜನಿಕರು ತೀವ್ರ ಗೊಂದಲಕ್ಕೊಳಗಾಗಿದ್ದಾರೆ, ಎಂದು ಆರೋಪಿಸಿದರು.

ಯಾವುದೇ ಅರ್ಹ ಮತದಾರರು ತಮ್ಮ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗಬಾರದು ಎಂಬ ಏಕೈಕ ಉದ್ದೇಶದಿಂದ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಎಸ್‌ಐಆರ್ ಸಹಾಯ ಕೇಂದ್’ಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತ ಮಾರ್ಗದರ್ಶನ ನೀಡುತ್ತಿವೆ. ಮತದಾರರಿಗೆ ಸರಿಯಾದ ಮಾಹಿತಿ ನೀಡಿ, ಅರ್ಜಿಗಳನ್ನು ಭರ್ತಿ ಮಾಡಲು ನೆರವಾಗುವುದು ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಇರುವ ಸಾರ್ವಜನಿಕ ಸೇವೆಯಾಗಿದೆ

ಆದರೆ, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ ನೀಡಿರುವ ಸಾರ್ವಜನಿಕ ಹೇಳಿಕೆಗಳು ಆಕ್ಷೇಪಾರ್ಹವಾಗಿವೆ. ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ಇಂತಹ ಸಹಾಯ ಕೇಂದ್ರಗಳ ಬಗ್ಗೆ ಇಬ್ಬರೂ ನಾಯಕರು ಸಂಶಯ ವ್ಯಕ್ತಪಡಿಸಿರುವುದು ವರದಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ಮುಖಂಡರ ಹೇಳಿಕೆಗಳು ನಿಖರವಾದ ಮಾಹಿತಿ ಮತ್ತು ಪರಿಶೀಲಿಸಿದ ವಾಸ್ತವಾಂಶಗಳ ಆಧಾರದ ಮೇಲೆಯೇ ಇರಬೇಕು. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನಿರ್ದಿಷ್ಟ ಸಮುದಾಯ ಅಥವಾ ಧಾರ್ಮಿಕ ಸಂಸ್ಥೆಯನ್ನು ಗುರಿಯಾಗಿಸುವುದು ಸಮಾಜದಲ್ಲಿ ಅನಗತ್ಯ ಗೊಂದಲ ಹಾಗೂ ವಿಭಜನೆಗೆ ಕಾರಣವಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ಒಂದು ಸಂಘಟನೆ ಅಥವಾ ಸಮುದಾಯ ನಡೆಸುವ ಸಹಾಯ ಕೇಂದ್ರವನ್ನು ಸಾರ್ವಜನಿಕ ಸೇವೆಯಾಗಿ ಪರಿಗಣಿಸಿ, ಮತ್ತೊಂದು ಸಮುದಾಯ ನಡೆಸುವ ಕೇಂದ್ರವನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಈ ರೀತಿಯ ದ್ವಂದ್ವ ಮಾನದಂಡವು ಭಾರತದ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತರುತ್ತದೆ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಅರ್ಹ ಭಾರತೀಯನ ಮತವೂ ಅತ್ಯಂತ ಅಮೂಲ್ಯವಾಗಿದೆ. ಪ್ರಜಾಪ್ರಭುತ್ವದ ರಕ್ಷಣೆ ಯಾವುದೇ ಒಂದು ಪಕ್ಷ ಅಥವಾ ಸಮುದಾಯದ ಹೊಣೆಯಲ್ಲ, ಅದು ನಮ್ಮೆಲ್ಲರ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಆದ್ದರಿಂದ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಎಸ್‌ಐಆರ್ ಪ್ರಕ್ರಿಯೆಯನ್ನು ಧರ್ಮ, ಜಾತಿ ಅಥವಾ ರಾಜಕೀಯ ದೃಷ್ಟಿಕೋನದಿಂದ ನೋಡದೆ ಕೇವಲ ಕಾನೂನಿನ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು ಎಂದರು.

ಪತ್ರಿಕಾ ಘೊಷ್ಟಿಯಲ್ಲಿ  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ರಿಯಾಜ್ ಅಹ್ಮದ್ ಹಾಗೂ ಪೀಸ್ ಆರ್ಗನೈಸೇಷನ್ ಪದಾಧಿಕಾರಿಗಳಾದ ಇಮ್ರಾನ್ ಖಾನ್ ಮಖ್ಸೂದ್, ಅನಿಸ್ ಇಕ್ಬಾಲ್, ಸಫೀ, ಸೈಫುಲ್ಲಾ ಮತ್ತು ಜಕಾವುಲ್ಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Shimoga

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.