Shimoga Theft Case ಶಿವಮೊಗ್ಗ: ನಗರದ ಪೊಲೀಸ್ ಠಾಣಾ ವ್ಯಾಪ್ತಿಯೊಂದರ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸ್ವಂತ ಮಗ ಹಾಗೂ ಆತನ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆ ಎಂದು ತಂದೆಯೇ ಪೊಲೀಸರಿಗೆ ದೂರು ನೀಡಿರುವ ಅಪರೂಪದ ಘಟನೆಯೊಂದು ಸಂಭವಿಸಿದೆ.

ನಗರದ ಪೊಲೀಸ್ ಠಾಣಾ ವ್ಯಾಪ್ತಿಯೊಂದರ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದ ತಕ್ಷಣ, ಮನೆಯ ಮಾಲೀಕರು ತಕ್ಷಣವೇ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಳ್ಳತನ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು, ನಿಮಗೆ ಯಾರ ಮೇಲಾದರೂ ಅನುಮಾನವಿದೆಯೇ ಎಂದು ಮನೆಯ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಾಲೀಕರು, ಈ ಕಳ್ಳತನವನ್ನು ನನ್ನ ಸ್ವಂತ ಮಗ ಹಾಗೂ ಆತನ ಸ್ನೇಹಿತರೇ ಸೇರಿ ನಡೆಸಿರಬಹುದು ಅನುಮಾನ ವ್ಯಕ್ತಪಡಿಸಿದ್ದಾರೆ.
ತಂದೆಯ ದೂರನ್ನು ಆಲಿಸಿದ 112 ಸಿಬ್ಬಂದಿಯು, ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
