ಮಲೆನಾಡು ಟುಡೆ ಸ್ಪೆಷಲ್ ಸ್ಟೋರಿ/ ಶಿವಮೊಗ್ಗ : ಇದು ಮತಗಳ ಜಗಳ ಅಂತಾ ಶುರುವಾಗುವ ಹಾಡೊಂದು ನೀವೇಲ್ಲಾ ಕೇಳೆ ಇರುತ್ತೀರಿ, ಆ ಹಾಡಿನ ಭಾವದ ಕ್ಷಣವೆಂದೆ ಕಾಣುವ ಆಚರಣೆಯೊಂದರ ಬಗ್ಗೆ ಇವತ್ತು ಹೇಳುತ್ತಿದ್ದೇವೆ. ಧರ್ಮಗಳ ನಡುವೆ ಗೋಡೆಗಳು ಸೃಷ್ಟಿಯಾಗುತ್ತಿರುವ ನಡುವೆಯೇ, ಕೋಮು ಸೌಹಾರ್ದತೆಯ ಅಪರೂಪದ ಆಚರಣೆಯೊಂದು ನಮ್ಮೂರಲ್ಲಿ ನಡೆಯುತ್ತದೆ. ಆ ಆಚರಣೆ ಮೊಹರಂ. ಒಂದೇ ಒಂದು ಮುಸ್ಲಿಂ ಕುಟುಂಬವೂ ಇಲ್ಲದ ಗ್ರಾಮವೊಂದರಲ್ಲಿ ಇಡೀ ಬಂಜಾರ ಸಮುದಾಯದ ಜನರು ಒಟ್ಟಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ.
ಶೀರಿಹಳ್ಳಿ ತಾಂಡಾದಲ್ಲಿ ನಡೆಯುವ ಆಚರಣೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಈ ವಿಶಿಷ್ಟ ಮತ್ತು ಭಾವೈಕ್ಯತೆಯ ಆಚರಣೆ ನಡೆದಿದೆ. ಈ ತಾಂಡಾದಲ್ಲಿ ಸಂಪೂರ್ಣವಾಗಿ ಬಂಜಾರ ಸಮುದಾಯದವರೇ ವಾಸವಾಗಿದ್ದು, ಇಲ್ಲಿ ಯಾವುದೇ ಮುಸ್ಲಿಂ ಮನೆಗಳಿಲ್ಲ. ಆದಾಗ್ಯೂ, ಇಲ್ಲಿನ ಜನರಿಗೆ ಮೊಹರಂ ಹಬ್ಬದ ಮೇಲಿರುವ ಭಕ್ತಿ ಹಾಗೂ ನಂಬಿಕೆ ಮಾತ್ರ ಅನನ್ಯವಾದದ್ದು. ವರ್ಷಂಪ್ರತಿಯಂತೆ ಈ ಬಾರಿಯೂ ಇಡೀ ತಾಂಡಾದ ಜನತೆ ಒಂದಾಗಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ.






ಮೂರು ದಿನಗಳ ಕಾಲ ಪೂಜೆ
ಶೀರಿಹಳ್ಳಿ ತಾಂಡಾದಲ್ಲಿ ಸತತ ಮೂರು ದಿನಗಳ ಕಾಲ ಮೊಹರಂ ಆಚರಣೆ ನಡೆಯುತ್ತದೆ. ಬಂಜಾರ ಸಮುದಾಯದ ಹಿರಿಯರು ಹಾಗೂ ಯುವಕರು ಸೇರಿ ಗ್ರಾಮದ ಖಾಜಾ ಬಂಧನ್ ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳೊಂದಿಗೆ ‘ಅಲೈದೇವರನ್ನು’ ಪ್ರತಿಷ್ಠಾಪಿಸಿ, ಮೂರು ದಿನಗಳ ಕಾಲ ನಿಷ್ಠೆಯಿಂದ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಹಾಗೂ ನೈವೇದ್ಯಗಳನ್ನು ಸಲ್ಲಿಸುತ್ತಾರೆ.
ಬಂಜಾರ ಸಂಪ್ರದಾಯದ ಗಾಯನ
ವಿಶೇಷ ಆಚರಣೆಯ ನಂತರ ಮೂರನೇ ದಿನದಂದು ತಾಂಡಾದ ಬೀದಿ ಬೀದಿಗಳಲ್ಲಿ ಅಲೈ ದೇವರ ಅದ್ದೂರಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಗುತ್ತದೆ. ಈ ಮೆರವಣಿಗೆಯ ಉದ್ದಕ್ಕೂ ಬಂಜಾರ ಸಮುದಾಯದ ಮಹಿಳೆಯರು ಮತ್ತು ಪುರುಷರು ತಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಸಾಂಸ್ಕೃತಿಕ ಹಾಡುಗಳು ಹಾಗೂ ಭಜನೆಗಳ ಮೂಲಕ ಅಲೈ ದೇವರಿಗೆ ವಿಶಿಷ್ಟವಾಗಿ ಭಕ್ತಿ ಸಮರ್ಪಿಸುತ್ತಾರೆ. ನಿನ್ನೆಯು ಸಹ ಈ ಆಚರಣೆ ವಿಶೇಷವಾಗಿ ನಡೆದಿದ್ದು, ಕೇವಲ ಧಾರ್ಮಿಕ ಆಚರಣೆಯಾಗಿರದೆ ಕಲೆಯ ಸಮ್ಮಿಲನವಾಗಿ ಕಂಡು ಬಂತು.

ಕಷ್ಟಗಳನ್ನು ನೀಗಿಸುವ ದೇವರೆಂಬ ನಂಬಿಕೆ
ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ತಾಂಡಾದ ಭಕ್ತರು ತಮ್ಮ ಜೀವನದ ಕಷ್ಟ-ಕಾರ್ಪಣ್ಯಗಳನ್ನು, ಅನಾರೋಗ್ಯದ ಸಮಸ್ಯೆಗಳನ್ನು ಅಲೈ ದೇವರ ಮುಂದೆ ಪ್ರಾರ್ಥಿಸಿಕೊಂಡು ಹೇಳಿಕೊಳ್ಳುತ್ತಾರೆ. ಇದೇ ವೇಳೆ ದೇವರಿಂದ ‘ಹೇಳಿಕೆ’ (ಅಪ್ಪಣೆ ಅಥವಾ ಭವಿಷ್ಯದ ನುಡಿ) ಕೇಳುವ ವಿಶಿಷ್ಟ ಸಂಪ್ರದಾಯವೂ ಇಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ
ಮೂರನೇ ದಿನದ ಆಚರಣೆಯ ನಂತರ ತಡೋ ದೇವರ ಬಳಿ ಹೋಗಿ ಪೂಜೆ ಸಲ್ಲಿಸಲಾಗುತ್ತೆ ನಂತರ, ಮೂರು ದಿನಗಳ ಕಾಲ ಶ್ರದ್ಧೆಯಿಂದ ವ್ರತ ಆಚರಿಸಿ ಧರಿಸಿದ್ದ ‘ಅಲೈ ಮಾಲೆ’ಯನ್ನು ಭಕ್ತರು ಕೆರೆ ನೀರಿನಲ್ಲಿ ವಿಸರ್ಜನೆ ಮಾಡುವರು. ನಿನ್ನೆಯು ಸಹ ನೀರಲ್ಲಿ ಬಿಟ್ಟು ಪೂಜೆ ಸಲ್ಲಿಸುವುದರೊಂದಿಗೆ ಈ ವರ್ಷದ ಸೌಹಾರ್ದತೆಯ ಮೊಹರಂ ಆಚರಣೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz

