ಖಾಸಗಿ ಫೋಟೋ ವಿಡಿಯೋ ಲೀಕ್ ಮಾಡಿದರೆ 7 ವರ್ಷ ಜೈಲು, 10 ಲಕ್ಷ ದಂಡ! ತಪ್ಪದೆ ಓದಿ

Leaking Private Photos New Guidelines / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಅನ್ಯ ಪ್ಲಾಟ್​ಫಾರಮ್​ಗಳಲ್ಲಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಗಂಭೀರವಾದದಂತಹ ಅಪರಾಧ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಕಾನೂನು ಉಲ್ಲಂಘಿಸುವವರ ವಿರುದ್ಧ ತಕ್ಷಣವೇ ಕೇಸ್ ದಾಖಲಾಗಲಿದೆ. ಅಲ್ಲದೆ ಅಪರಾಧ ಸಾಬೀತಾದಲ್ಲಿ ಗರಿಷ್ಠ 10 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷಗಳ ಕಾಲ ಕಾರಾಗೃಹ ವಾಸದ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸದ್ಯ ಈ ಬಗ್ಗೆ ಪೊಲೀಸ್ ಇಲಾಖೆ ಈ ಕಾನೂನಿನ ಕುರಿತಾಗಿ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆ ಬಗೆಗಿನ ವಿವರ ಹೀಗಿದೆ.

ಸೈಬರ್ ಅಪರಾಧಗಳು, ಬ್ಲಾಕ್‌ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ತಕ್ಷಣವೇ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯಾದ್ಯಂತ ಏಕರೂಪದ ಅನುಷ್ಠಾನಕ್ಕಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು “ಸ್ಥಾಯಿ ಆದೇಶ 1061″ರ ಅಡಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಕಾನೂನು ಕ್ರಮ ಮತ್ತು ಶಿಕ್ಷೆ

  • ಬಿಎನ್‌ಎಸ್ 2023 ಸೆಕ್ಷನ್ 77: ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77 ರನ್ವಯ ಮಹಿಳೆಯರ ಖಾಸಗಿ ಕ್ಷಣಗಳನ್ನು ಇಣುಕುವುದು, ಚಿತ್ರೀಕರಿಸುವುದು ಅಥವಾ ಪ್ರಸಾರ ಮಾಡಿದರೆ ಮೊದಲ ಅಪರಾಧಕ್ಕೆ 1 ರಿಂದ 3 ವರ್ಷ ಹಾಗೂ ಪುನರಾವರ್ತಿತ ಅಪರಾಧಕ್ಕೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.
  • ಐಟಿ ಕಾಯ್ದೆ 2000 ಸೆಕ್ಷನ್ 66(ಇ): ಅನುಮತಿಯಿಲ್ಲದೆ ವ್ಯಕ್ತಿಯ ಖಾಸಗಿ ಅಂಗಗಳ ಚಿತ್ರ ಸೆರೆಹಿಡಿಯುವುದು ಅಥವಾ ಪ್ರಸಾರ ಮಾಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ 2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
  • ಐಟಿ ಕಾಯ್ದೆ ಸೆಕ್ಷನ್ 67 ಮತ್ತು 67(ಎ): ಅಶ್ಲೀಲ ಮತ್ತು ಲೈಂಗಿಕ ವಿಷಯಗಳ ಬಗ್ಗೆ ಎಲೆಕ್ಟ್ರಾನಿಕ್ ರೂಪದಲ್ಲಿ ವಿಷಯಗಳನ್ನು ಹರಡಿದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 5 ಲಕ್ಷದಿಂದ 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ವಿಡಿಯೋ ಫೋಟೋ ತೆಗೆಯಲು ಅನುಮತಿ ಇದ್ದಲ್ಲಿ?

ಹೊಸ ಕಾನೂನಿನಲ್ಲಿ ಈ ಬಗ್ಗೆಯು ಸ್ಪಷ್ಟನೆ ನೀಡಲಾಗಿದೆ. ವಿಡಿಯೋ ಫೋಟೋ ಚಿತ್ರೀಕರಣಕ್ಕೆ ಒಪ್ಪಿಗೆ ಇದೆ ಎಂತಾದರೆ, ಅದು ಆ ವಿಡಿಯವನ್ನು ಪ್ರಸಾರ ಮಾಡಲು ನೀಡಿದ ಒಪ್ಪಿಗೆಯಲ್ಲ. ಸಂತ್ರಸ್ತರು ಆರಂಭದಲ್ಲಿ ಚಿತ್ರ ಅಥವಾ ವಿಡಿಯೋ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ ಸಹ, ಅದನ್ನು ಇತರರಿಗೆ ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ಇರದೇ ಇದ್ದ ಪಕ್ಷದಲ್ಲಿ ಅದನ್ನು ಪ್ರಚಾರಪಡಿಸುವುದನ್ನು ಬಿಎನ್‌ಎಸ್‌ ಕಾಯ್ದೆ ಪ್ರಕಾರ ಸಂಜ್ಞೇಯ ಅಪರಾಧ ಎಂದೇ ಪರಿಗಣಿಸಲಾಗುತ್ತದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz