ಮಹಾರಾಷ್ಟ್ರದಲ್ಲಿ ಮಲೆನಾಡಿಗರ ಅಡಿಕೆ ಲಾಕ್! ಸಂಕಷ್ಟ ಪರಿಹಾರಕ್ಕೆ ಬಿಎಸ್​ವೈ ಎಂಟ್ರಿ! ದೆಹಲಿಗೆ ಕರೆ

ಶಿವಮೊಗ್ಗ |ಮಲೆನಾಡು ಮತ್ತು ಕರಾವಳಿ ಭಾಗದ ರೈತರ ಜೀವನಾಡಿಯಾಗಿರುವ ಅಡಿಕೆ ಉದ್ಯಮಕ್ಕೆ ಮಹಾರಾಷ್ಟ್ರದಲ್ಲಿ ಭಾರಿ ಆತಂಕ ಎದುರಾಗಿದೆ. ಶಿವಮೊಗ್ಗ, ಶಿರಸಿ ಹಾಗೂ ಸಿದ್ಧಾಪುರ ಭಾಗದಿಂದ ಉತ್ತರ ಭಾರತದ ರಾಜ್ಯಗಳಿಗೆ ಸಾಗಿಸಲಾಗುತ್ತಿದ್ದ ಸುಮಾರು 50 ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು, ರೈತರ ಹಿತರಕ್ಷಣೆಗೆ ತಾವು ಬದ್ಧರಾಗಿದ್ದು, ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸಿಎಂ ಮಟ್ಟದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಲಾರಿಗಳನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಸೇರಿದಂತೆ ಉತ್ತರ ಕನ್ನಡದ ಶಿರಸಿ ಹಾಗೂ ಸಿದ್ಧಾಪುರ ಭಾಗದ ಮಾರುಕಟ್ಟೆಗಳಿಂದ ಅಡಿಕೆಯನ್ನು ಲೋಡ್ ಮಾಡಿಕೊಂಡು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ನವದೆಹಲಿಯತ್ತ ತೆರಳುತ್ತಿದ್ದ ಲಾರಿಗಳನ್ನು ಮಹಾರಾಷ್ಟ್ರದ ಬೀಡ್, ನಾಂದೇಡ್, ಔರಂಗಾಬಾದ್, ನಾಗಪುರ, ಧುಳೆ ಮತ್ತು ಹಿಂಗೋಲಿ ಜಿಲ್ಲೆಗಳ ಹೆದ್ದಾರಿಗಳಲ್ಲಿ ಎಫ್‌ಡಿಎ ಅಧಿಕಾರಿಗಳು ತಡೆದು ನಿಲ್ಲಿಸಿ ಸೀಜ್ ಮಾಡಿದ್ದಾರೆ. ಇದರಿಂದ ಕಂಗಾಲಾದ ಅಡಿಕೆ ಬೆಳೆಗಾರರು ಹಾಗೂ ವರ್ತಕರ ಬೃಹತ್ ನಿಯೋಗವು ಇಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ ತುರ್ತು ಮನವಿ ಸಲ್ಲಿಸಿತು.

ನಾವು ಈ ಅಡಿಕೆಯನ್ನು ಮಹಾರಾಷ್ಟ್ರದ ಯಾವುದೇ ಭಾಗದಲ್ಲಿ ಮಾರಾಟ ಮಾಡುತ್ತಿಲ್ಲ, ಕೇವಲ ಅಲ್ಲಿನ ಹೆದ್ದಾರಿಗಳ ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಅಡಿಕೆಯು ಗುಟ್ಕಾ, ಪಾನ್ ಮಸಾಲಾದಂತಹ ನಿಷೇಧಿತ ಪದಾರ್ಥಗಳ ಪಟ್ಟಿಗೆ ಸೇರುವುದಿಲ್ಲ. ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಣೆಗೆ ಯಾವುದೇ ಕಾನೂನಾತ್ಮಕ ನಿಷೇಧವಿಲ್ಲದಿದ್ದರೂ ಅಧಿಕಾರಿಗಳು ವಿನಾಕಾರಣ ಲಾರಿಗಳನ್ನು ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟದ ಜೊತೆಗೆ ರೈತರ ಜೀವನೋಪಾಯಕ್ಕೆ ಸಂಚಕಾರ ಬಂದಿದೆ ಎಂದು ನಿಯೋಗವು ಸಂಸದರ ಮುಂದೆ ಅಳಲು ತೋಡಿಕೊಂಡಿತು.

MP BY Raghavendra ಕೇಂದ್ರ ಸಚಿವರಿಗೆ ಬಿ.ಎಸ್.ಯಡಿಯೂರಪ್ಪ ತಕ್ಷಣದ ಕರೆ

ಅಡಿಕೆ ಬೆಳೆಗಾರರ ಪ್ರಮುಖ ಸಹಕಾರಿ ಸಂಸ್ಥೆಯಾದ ಮಾಮ್ಕೋಸ್ ನೇತೃತ್ವದಲ್ಲಿ ರೈತರ ನಿಯೋಗವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಪಂದಿಸಿದ ಬಿ.ಎಸ್.ಯಡಿಯೂರಪ್ಪ ಅವರು, ದೆಹಲಿಯಲ್ಲಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ನೇರವಾಗಿ ದೂರವಾಣಿ ಕರೆ ಮಾಡಿದರು. ಮಹಾರಾಷ್ಟ್ರದಲ್ಲಿ ಮಲೆನಾಡಿನ ಅಡಿಕೆ ಲಾರಿಗಳನ್ನು ತಡೆದಿಟ್ಟಿರುವುದರಿಂದ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟ ಯಡಿಯೂರಪ್ಪ, ಕೇಂದ್ರದ ಮಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ತಂದು ತಕ್ಷಣವೇ ಸೂಕ್ತ ಕಾನೂನು ನೆರವು ಒದಗಿಸುವಂತೆ ಸೂಚಿಸಿದರು.

MP BY Raghavendra ರೈತರ ಬೆನ್ನೆಲುಬಾಗಿ ನಿಂತ ಸಂಸದ ಬಿ.ವೈ.ರಾಘವೇಂದ್ರ

ಅಡಿಕೆ ಬೆಳೆಗಾರರ ಕಳವಳಕ್ಕೆ ತಕ್ಷಣ ಸ್ಪಂದಿಸಿದ ಸಂಸದ ಬಿ.ವೈ. ರಾಘವೇಂದ್ರ, ಅಡಿಕೆ ಬೆಳೆಯು ಈ ಭಾಗದ ಸಾವಿರಾರು ರೈತ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಿಕೆ ಸಾಗಾಣಿಕೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಈ ಹಿಂದೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಅಲ್ಲಿನ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

MP BY Raghavendra ನಿಯೋಗಕ್ಕೆ ಸಂಸದರು ನೀಡಿದ ಪ್ರಮುಖ ಭರವಸೆಗಳು

ಮಹಾರಾಷ್ಟ್ರದಲ್ಲಿ ಸೀಜ್ ಆಗಿರುವ ಎಲ್ಲಾ 50 ಅಡಿಕೆ ಲಾರಿಗಳನ್ನು ಯಾವುದೇ ಷರತ್ತಿಲ್ಲದೆ ತಕ್ಷಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಮೂಲಕ ತಕ್ಷಣವೇ ಪ್ರಬಲ ಒತ್ತಡ ತರುವುದು.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರೊಂದಿಗೆ ಸ್ವತಃ ತಾವೇ ನೇರ ಸಂಪರ್ಕ ಸಾಧಿಸಿ, ಭವಿಷ್ಯದಲ್ಲಿ ಹೆದ್ದಾರಿಯಲ್ಲಿ ಅಡಿಕೆ ಸಾಗಾಣಿಕೆಗೆ ಯಾವುದೇ ತೊಂದರೆಯಾಗದಂತೆ ಅಧಿಕೃತ ಲಿಖಿತ ಆದೇಶ ಜಾರಿಗೆ ತರುವುದು.

ಅಡಿಕೆ ಬೆಳೆಗಾರರ ಹಕ್ಕುಗಳ ರಕ್ಷಣೆಗೆ ತಾವು ಸದಾ ಸಿದ್ಧರಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ವಿಶ್ರಮಿಸುವುದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲೆಯ ಪ್ರಮುಖ ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.

MP BY Raghavendra Fights For Seized Arecanut Trucks