ಮಲೆನಾಡು ಟುಡೆ ಸುದ್ದಿ / ಹೊಸನಗರ / ಬದುಕು ಎಂಬುದು ನಾಲ್ಕೆ ದಿನ ಎಂಬುದು ಸತ್ಯವೇ ಆದರೂ ಕೆಲವೊಮ್ಮ ದೀರ್ಘಾಯಸ್ಸು ಹಿರಿಯ ಜೀವನಗಳ ಹಿಂಡಿ ಹಿಪ್ಪೆ ಮಾಡುತ್ತದೆ. ಕೇಳುವವರಿಲ್ಲದೆ , ಆರೋಗ್ಯವೂ ಸಹಕರಿಸಿದೆ ಇದ್ದಾಗ, ಮಾತಿಗೂ ಚಡಪಡಿಕೆಯಾಗಿ, ನಿರ್ಲಕ್ಷಿತನಾದಾಗ ದೇವರೇ ಕರೆದುಕೊಂಡು ಬಿಡಪ್ಪ ಎಂದು ಬೇಡುವ ಸನ್ನಿವೇಶಗಳು ಎದುರಾಗಿ ಬಿಡುತ್ತದೆ. ಇಳಿ ವಯಸ್ಸಿನ ಭಾವ, ಎಳೆ ವಯಸ್ಸಿನ ಕಣ್ಗಳಿಗೆಂದು ಕಾಣದು..ಏಕೆಂದರೆ ಈ ಜಗತ್ತೆ ಹಾಗೆ ಅವರ ಜೀವನಾತುರತೆ ಅವರಿಗೆ ಹೆಚ್ಚಾಗಿರುತ್ತದೆ.
ಇಂತಹ ಒಂದು ದೀರ್ಘಾಯಸ್ಸಿನ ಸುದೀರ್ಘ ಪಯಣದಲ್ಲಿ ಎದುರಾಗುವ ಕಷ್ಟ, ಕಾರ್ಪಣ್ಯ, ನೋವು ಹಾಗೂ ಒಂಟಿತನ ಕೆಲವೊಮ್ಮೆ ಮನುಷ್ಯನ ಸಹನಾ ಶಕ್ತಿಯ ಕಟ್ಟೆ ಒಡೆಯುವಂತೆ ಮಾಡುತ್ತದೆ. ನಿನ್ನೆ ದಿನ ಮಲೆನಾಡು ಟುಡೆಯಲ್ಲಿ ಸಾವಿಗೆ ಸಾವಿರ ದಾರಿ ಎಂದರೆ ಇದೇನಾ ಎಂಬ ಟೈಟಲ್ ಕಾರ್ಡ್ನ ಅಡಿಯಲ್ಲಿ ಅಡಿಕೆ ಮರ ಬಿದ್ದು ಸಾವನ್ನಪ್ಪಿದ ವ್ಯಕ್ತಿಯ ಬಗ್ಗೆ ಓದಿದ್ರಿ. ಇದು ಅಂತಹುದ್ದೆ ಬಟ್ ಡಿಫರೆಂಟ್ ಆದ ಜೀವನ ವಾಖ್ಯಾನದ ನೈಜ ಘಟನೆ
ಈ ಘಟನೆಯಲ್ಲಿ ಬದುಕಿನ ಮುಸ್ಸಂಜೆಯಲ್ಲಿ, ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ ನೆಮ್ಮದಿಯಿಂದ ಇರಬೇಕಾದ ವಯಸ್ಸಿನಲ್ಲಿ, ಮನುಷ್ಯನೊಬ್ಬ ತನ್ನ ಪ್ರಾಣವನ್ನು ತಾನೇ ತೆಗೆದುಕೊಳ್ಳುವ ಕಠೋರ ನಿರ್ಧಾರಕ್ಕೆ ಬರುತ್ತಾನೆ ಎಂದರೆ, ಆತ ಅನುಭವಿಸುತ್ತಿದ್ದ ಮಾನಸಿಕ ಹಾಗೂ ದೈಹಿಕ ಯಾತನೆ ಎಷ್ಟು ಭೀಕರವಾಗಿರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. ಹೌದು ಇಂತಹದೊಂದು ದಾರುಣ ಹಾಗೂ ಅತ್ಯಂತ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಬಳಿಯ ತಟ್ಟೆಕೊಡ್ಲು (ಕೋಟೆಶಿರೂರು) ಗ್ರಾಮದಲ್ಲಿ ಸಂಭವಿಸಿದೆ.
85 ವರ್ಷದ ವಯೋವೃದ್ಧರೊಬ್ಬರು ತಮ್ಮದೇ ಬಂದೂಕಿನಿಂದ ತಮ್ಮದೆ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಬಿ.ಆರ್. ರಾಮಚಂದ್ರ ರಾವ್ (85) ಎಂಬುವವರೇ ಈ ರೀತಿ ದುರಂತ ಅಂತ್ಯ ಕಂಡಿರುವ ದುರ್ದೈವಿ. ವಯಸ್ಸಾಗುತ್ತಿದ್ದಂತೆ ಮನುಷ್ಯನಿಗೆ ಪ್ರಮುಖವಾಗಿ ಆಸರೆಯಾಗಿರುವುದು ತನ್ನ ಜೀವನ ಸಂಗಾತಿ ಹಾಗೂ ಉತ್ತಮ ಆರೋಗ್ಯ. ಆದರೆ, ವಯೋವೃದ್ಧ ರಾಮಚಂದ್ರ ರಾವ್ ಅವರ ಪಾಲಿಗೆ ಇವೆರಡೂ ದೂರವಾಗಿದ್ದವು.
ಕುಟುಂಬದ ಮೂಲಗಳು ಮತ್ತು ಆಪ್ತರು ತಿಳಿಸಿರುವಂತೆ, ಸುಮಾರು 5 ವರ್ಷಗಳ ಹಿಂದೆ ರಾಮಚಂದ್ರ ರಾವ್ ಅವರು ತಮ್ಮ ಧರ್ಮಪತ್ನಿಯನ್ನು ಕಳೆದುಕೊಂಡಿದ್ದರು. ಪತ್ನಿಯ ಅಗಲಿಕೆಯು ಇವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಇನ್ನೂ ಮಾನಸಿಕವಾಗಿ ಮಾತ್ರವಲ್ಲದೆ, ದೈಹಿಕವಾಗಿಯೂ ತೀವ್ರ ಸಂಕಷ್ಟ ಎದುರಿಸುತ್ತಿದ್ದರು ರಾಮಚಂದ್ರರಾವ್. ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ಕಳೆದ 3 ದಿನಗಳ ಹಿಂದೆಯಷ್ಟೇ ತಲೆತಿರುಗಿ ಬಿದ್ದಿದ್ದರು. ಪರಿಣಾಮ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಈ ಎಲ್ಲಾ ಕಾರಣದಿಂದಾಗಿ ಇನ್ನಿಲ್ಲದ ಯಾತನೆ ಅನುಭವಿಸ್ತಿದ್ದ ರಾಮಚಂದ್ರರಾವ್ ಅಂತಿಮವಾಗಿ ಒಂದೇ ಸಹ ಬುಲೆಟ್ನ ನೋವು ತಿನ್ನಲು ಸಿದ್ದರಾಗಿ ಅದನ್ನ ಕಾರ್ಯಗತಗೊಳಿಸಿದ್ದರು.
ಮಲಗುವ ಕೋಣೆಯಲ್ಲಿ ಸ್ವಯಂಕೃತ ಕೊ@ಲೆ!
ನೋವು ತಾಳಲಾರದೆ, ಈ ಬದುಕೇ ಸಾಕು ಎಂದುಕೊಂಡವರು ಭಾನುವಾರ ರಾತ್ರಿ ತಮ್ಮ ಕೋಣೆಯಲ್ಲಿಯೇ ಇದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದರು. ಸಿಂಗಲ್ ಬ್ಯಾರೆಲ್ ಗನ್ ನಿಂದ ತಾವೆ ಹಾರಿಸಿದ ಗುಂಡಿಗೆ ರಾಮಚಂದ್ರ ರಾವ್ರವರ ತಲೆ ಸಂಪೂರ್ಣ ಛಿದ್ರವಾಗಿತ್ತು. ರಕ್ತ ಮೆತ್ತಿದ ಮಾಂಸದ ಚೂರುಗಳು ಇಡೀ ಕೋಣೆಯ ತುಂಬೆಲ್ಲಾ ಗೋಡೆಗೆ ನೆಲಕ್ಕೆ ಅಂಟಿಕೊಂಡು ಘಟನೆಯ ಭೀಕರತೆಯನ್ನು ಹೇಳುತ್ತಿತ್ತು.
ಗುಂಡು ಹಾರಿದ ಶಬ್ಧ ಕೇಳಿದ ತಕ್ಷಣವೇ ಮನೆಯವರೆಲ್ಲಾ ಗಾಬರಿಯಾಗಿ ಕೋಣೆಗೆ ಬಂದಿದ್ದಾರೆ. ಅಲ್ಲದೆ ಮೈಮೇಲೆ ಬಂದೂಕನ್ನ ಇಟ್ಟು ಕೊಂಡು ಗೋಡೆ ಒರಗಿದ ತಲೆ ಛಿದ್ರವಾದ ದೇಹ ಕಾಣಿಸಿದೆ. ಭಯಬಿದ್ದ ಮನೆಮಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣವೇ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಶಿವಮೊಗ್ಗ ಎಸ್.ಪಿ ಬಿ. ನಿಖಿಲ್ ಅವರು ಈ ಕುರಿತು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದು, ನಗರ ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಸುಕೂ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಸೂಕ್ತ ಪರಿಶೀಲನೆ ನಡೆಸಿದೆ. ರಾಮಚಂದ್ರ ರಾವ್ ಅವರು ಬಳಸಿದ ಗನ್ ಪರವಾನಗಿ ಚಾಲ್ತಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಪೊಲೀಸರು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಸಿದೆ. ಒಟ್ಟಿನಲ್ಲಿ, ನೆಮ್ಮದಿಯ ನಿಟ್ಟುಸಿರು ಬಿಡಬೇಕಿದ್ದ ಜೀವವೊಂದು, ಯಮನನ್ನೆ ಬರೆಸೆಳೆದುಕೊಳ್ಳುವ ಸ್ವಯಂಕೃತ ಕೊಲೆಯ ಹಾದಿಯನ್ನು ಹಿಡಿವುದು ನಿಜಕ್ಕೂ ನಿಗೂಢ ಅನಿಸುತ್ತೆ..
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
