ಭದ್ರಾವತಿ: ಕಳೆದ 2020ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು ಕಠಿಣ ಕಾರಾವಾಸ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಲಾಭಾಂಶದ ಆಸೆಗೆ ಬರೋಬ್ಬರಿ 53 ಲಕ್ಷ ಕಳೆದುಕೊಂಡ ಶಿವಮೊಗ್ಗ ವ್ಯಕ್ತಿ, ನಡೆದಿದ್ದೇನು
Court ಪ್ರಕರಣದ ಹಿನ್ನೆಲೆ
2020ರ ಮೇ 10ರಂದು ಭದ್ರಾವತಿ ತಾಲ್ಲೂಕಿನ ಜಿಂಕಲೈನ್ ವೀರಾಪುರ ರಸ್ತೆಯ ತೆಂಗಿನ ತೋಟವೊಂದರಲ್ಲಿ ಮಂಜುನಾಥ್ ಎಂಬ ಯುವಕನ ಮೇಲೆ ಅಜೇಯ ಅಲಿಯಾಸ್ ಅಜ್ಜಿ, ತೇಜು, ಮನು, ಆದರ್ಶ, ಅರುಣ ಮತ್ತು ಪಾನಿಪುರಿ ರಂಗ ಎಂಬುವವರು ಗುಂಪು ಕಟ್ಟಿಕೊಂಡು ದಾಳಿ ನಡೆಸಿದ್ದರು. ಹಳೆಯ ವೈಷಮ್ಯ ಮನಸ್ಸಿನಲ್ಲಿಟ್ಟುಕೊಂಡಿದ್ದ ಈ ತಂಡವು, ಮಂಜುನಾಥ್ ಅವರನ್ನು ಹಿಡಿದುಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿತ್ತು. ಈ ಭೀಕರ ಹಲ್ಲೆಯಿಂದ ಮಂಜುನಾಥ್ ಅವರ ಕೈ ಹಾಗೂ ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು.
ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಎ.ಎಸ್.ಐ ಕುಬೇರಪ್ಪ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು
ಪ್ರಕರಣದ ವಿಚಾರಣೆ ನಡೆಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆರೋಪಿಗಳ ಮೇಲಿನ ಅಪರಾಧ ಸಾಬೀತಾಗಿದೆ ಎಂದು ಘೋಷಿಸಿದರು. ಮೇ 04, 2026ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯವು, ಮುಖ್ಯ ಆರೋಪಿ ಅಜೇಯನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಉಳಿದ ಐವರು ಆರೋಪಿಗಳಿಗೆ 3 ವರ್ಷಗಳ ಕಠಿಣ ಕಾರಾವಾಸ ವಿಧಿಸಿದೆ
ಶಿಕ್ಷೆಯ ಜೊತೆಗೆ ಎಲ್ಲಾ ಆರೋಪಿಗಳಿಗೆ ಒಟ್ಟು 2,30,000 ರೂಪಾಯಿಗಳ ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತದಲ್ಲಿ 1,50,000 ರೂಪಾಯಿಗಳನ್ನು ಹಲ್ಲೆಗೊಳಗಾದ ಸಂತ್ರಸ್ತ ಮಂಜುನಾಥ್ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.
