ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಳೆಯುವಂತೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುವ ಜಾಲವೊಂದು ಶಿವಮೊಗ್ಗದಲ್ಲಿ ಸಕ್ರಿಯವಾಗಿದೆ. ಈ ಗ್ಯಾಂಗ್ ಸಾಗರ ತಾಲೂಕಿನಲ್ಲಿ ಓಡಾಡುತ್ತಿದೆ ಎಂಬ ಇಂಟರ್ನಲ್ ಮೆಸೇಜ್ ಸಿಕ್ಕಿದೆ. ಈ ಕಾರಣಕ್ಕೆ ಪೊಲೀಸ್ ಇಲಾಖೆ ಅಲರ್ಟ್ ಸಂದೇಶವನ್ನು ರವಾನಿಸಿದೆ.
ಇತ್ತೀಚಿನ ದಿನಗಳಲ್ಲಿ ಅಪರಿಚಿತ ವ್ಯಕ್ತಿಗಳು ನೇರವಾಗಿ ಮನೆ ಬಾಗಿಲಿಗೆ ಬಂದು, ಹಳೆಯ ಆಭರಣಗಳನ್ನು ಹೊಸದರಂತೆ ಮಾಡಿಕೊಡುವ ಆಮಿಷವೊಡ್ಡಿ ವಂಚಿಸಲು ಯತ್ನಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಸಾಗರ ಪೊಲೀಸ್ ಸೂಚನೆ
- ನಗರದ ಯಾವುದೇ ಬಡಾವಣೆ ಅಥವಾ ಗ್ರಾಮೀಣ ಭಾಗಗಳಲ್ಲಿ ಅಪರಿಚಿತ ವ್ಯಕ್ತಿಗಳು ಗುಂಪುಗುಂಪಾಗಿ ಅಥವಾ ಒಂಟಿಯಾಗಿ ಅನುಮಾನಾಸ್ಪದವಾಗಿ ಓಡಾಡುವುದು ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು
- ಕೂಡಲೇ ಜಾಗೃತರಾಗಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಸಹಾಯವಾಣಿಗೆ ಮಾಹಿತಿ ನೀಡಬೇಕು.
- ಆಕರ್ಷಕ ಮಾತುಗಳಿಗೆ ಮರುಳಾಗಿ ಬೆಲೆಬಾಳುವ ಒಡವೆಗಳನ್ನು ಅಪರಿಚಿತರ ಕೈಗೆ ಕೊಟ್ಟು ಮೋಸ ಹೋಗಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹಳೆಯ ಆಭರಣಗಳನ್ನು ಹೊಸದರಂತೆ ಹೊಳೆಯುವ ಹಾಗೆ ಮಾಡಿಕೊಡಲಾಗುತ್ತದೆ ಎಂದು ಸಲ್ಲದ ಮಾತುಗಳ ಮೂಲಕ ನಂಬಿಕೆ ಮೂಡಿಸಿ ಚಿನ್ನ ಕದ್ದೊಯ್ಯುವಂತಹ ಪ್ರಕರಣಗಳು ಸಾಗರದಲ್ಲಿ ನಡೆಯುತ್ತಿದೆ. ದಯಮಾಡಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು
ಸಾಗರ ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw