Honeytrap cases are on the rise in Karnataka /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗವೂ ಸೇರಿದಂತೆ ಹನಿಟ್ರ್ಯಾಪ್ ಕೇಸ್ಗಳು ಜಾಸ್ತಿಯಾಗುತ್ತಿವೆ. ಸದ್ಯ ದಾವಣಗೆರೆ ಹಾಗೂ ಬೆಳಗಾವಿ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.ಶ್ರೀಮಂತರು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಹಾಗೂ ವಂಚನೆ ಮಾಡುವ ಕ್ರೈಂ ಸಲೀಸಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪುರುಷ ವರ್ಗ ಅಪರಿಚಿತರೊಂದಿಗೆ ಒಡನಾಟ ಬೆಳೆಸುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯ ತುರ್ತಾಗಿದೆ.

ಬೆಳಗಾವಿ ಕೇಸ್
ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಪ್ರಕರಣದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಮಂತ ಪುರುಷರನ್ನು ಸಂಪರ್ಕಿಸಿ ಲಾಡ್ಜ್‌ಗಳಿಗೆ ಕರೆದೊಯ್ದು ದರೋಡೆ ಮಾಡುತ್ತಿದ್ದ ದೀಪ ಮಹಾಲಿಂಗ ಅವಟಗಿ ಎಂಬ 33 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಈಕೆಯು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಈಕೆಯನ್ನ ಬಂಧಿಸಿರುವ ಪೊಲೀಸರು 11 ಮೊಬೈಲ್, ಒಂದು ಟ್ಯಾಬ್, 14 ಸಾವಿರ ರೂಪಾಯಿ ನಗದು ಹಾಗೂ 2 ಕಾರುಗಳು ಸೇರಿ ಒಟ್ಟು 32.86 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಮಾತನಾಡುತ್ತಾ ಶ್ರೀಮಂತರೊಂದಿಗೆ ಸ್ನೇಹ ಬೆಳೆಸಿ ಲಾಡ್ಜ್‌ಗೆ ಕರೆಯುತ್ತಿದ್ದ ಈ ಮಹಿಳೆ, ಅವರು ಕೊಠಡಿಯಲ್ಲಿ ಶೌಚಾಲಯಕ್ಕೆ ಹೋದ ತಕ್ಷಣ ಹೊರಗಿನಿಂದ ಲಾಕ್ ಮಾಡಿ ವಸ್ತುಗಳನ್ನು ದೋಚುತ್ತಿದ್ದಳು ಎಂದು ಆರೋಪಿಸಿದ್ದಾರೆ.

ದಾವಣಗೆರೆ ಕೇಸ್
ಇತ್ತ ದಾವಣಗೆರೆಯಲ್ಲಿ ನಡೆದಿರುವ ಮತ್ತೊಂದು ಪ್ರಕರಣದಲ್ಲಿ, ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ 66 ವರ್ಷದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲು ಯತ್ನಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಸುಷ್ಮಿತಾ, ಚನ್ನಬಸಪ್ಪ, ಕೃಷ್ಣಾ ಮತ್ತು ರಾಹುಲ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಶುಶ್ರೂಷಕಿಯಾಗಿದ್ದ ಸುಷ್ಮಿತಾ ಎಂಬಾಕೆಯು ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿ, ತಾನು ಕಷ್ಟದಲ್ಲಿದ್ದೇನೆ ಎಂದು ಹೇಳಿ ಆರ್ಥಿಕ ನೆರವು ಕೇಳಿದ್ದಳು. ಆನಂತರ ಹಣದ ವಿಚಾರ ಮಾತನಾಡಲು ಉದ್ಯಮಿಯನ್ನು ಖಾಸಗಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದ ಆಕೆಯು, ತನ್ನ ಜೊತೆಗಿದ್ದ ಇನ್ನೊಬ್ಬಾಕೆಯನ್ನು ಉದ್ಯಮಿ ಇದ್ದ ಕೊಠಡಿಯೊಳಗೆ ಕಳುಹಿಸಿದ್ದಳು. ಉದ್ಯಮಿಯು ಆ ಯುವತಿಯೊಂದಿಗೆ ಅರೆಬೆತ್ತಲೆ ಸ್ಥಿತಿಯಲ್ಲಿದ್ದಾಗ ಏಕಾಏಕಿ ಕೊಠಡಿಗೆ ನುಗ್ಗಿದ ಇತರ ಆರೋಪಿಗಳು, ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡು 25 ಲಕ್ಷ ರೂಪಾಯಿ ನೀಡದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಬ್ಲ್ಯಾಕ್‌ಮೇಲ್‌ಗೆ ಹೆದರಿ ಕೊನೆಗೆ 12 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಿಕೊಂಡಿದ್ದ ಉದ್ಯಮಿಯು,ಈ ಕುರಿತು ಅವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶಿವಮೊಗ್ಗದಲ್ಲಿಯು ನಡೆಯುತ್ತಿದೆ ಹನಿ ಕಹಾನಿ
ಬೆಳಗಾವಿ, ದಾವಣಗೆರೆಗೂ ಮೊದಲೇ ಶಿವಮೊಗ್ಗ ಜಿಲ್ಲೆಯ ಎರಡು ಪ್ರಮುಖ ತಾಲ್ಲೂಕುಗಳಲ್ಲಿ ದೊಡ್ಡ ಮಟ್ಟದ ಹನಿಟ್ರ್ಯಾಪ್ ಪ್ರಕರಣಗಳು ಕೇಳಿಬಂದಿದ್ದವು. ಅಲ್ಲದೆ ದೊಡ್ಡ ಮಟ್ಟಿಗಿನ ಚರ್ಚ ಸಹ ಈ ಬಗ್ಗೆ ನಡೆದಿತ್ತು. ಇತ್ತೀಚಿಗಿನ ಕೆಲವು ಪ್ರಕರಣಗಳು ಆತಂಕಕಾರಿ ಸಹ ಆಗಿದ್ದವು. ಈ ನಿಟ್ಟಿನಲ್ಲಿ ಎಚ್ಚರಿಕೆ ಒಂದೇ ಮದ್ದು ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.