ಶಿವಮೊಗ್ಗ : ಪ್ರಿಪೇಯ್ಡ್ ಆಟೋ ಕೌಂಟರ್ ಬುಕ್ ಮಾಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿದಿರಲಿ.

ಶಿವಮೊಗ್ಗ : ನಗರದಲ್ಲಿ ಆಟೋ ಚಾಲಕರು ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದವನ್ನು ತಪ್ಪಿಸಲು ಮತ್ತು ದರಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಶಿವಮೊಗ್ಗದ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್​ ನಿಲ್ದಾಣದಲ್ಲಿ ಆಟೋ ಪ್ರಿಪೇಯ್ಡ್ ಕೌಂಟರ್ ಅನ್ನು ತೆರೆಯಲಾಗಿದೆ. ಆದರೆ ಬಹುತೇಕ ಪ್ರಯಾಣಿಕರು ಇದರ ಬಳಕೆ ಹೇಗೆ ಮತ್ತು ದರವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂಬ ಗೊಂದಲದಿಂದ ಕೌಂಟರ್‌ನಲ್ಲಿ ಆಟೋ ಬುಕ್ ಮಾಡುವ ಗೌಜಿಗೆ ಹೋಗುವುದಿಲ್ಲ. ಆದ್ದರಿಂದ, ಆ ಎಲ್ಲಾ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ಬರೆಯಲಾಗಿದೆ.

ಶಿವಮೊಗ್ಗ ಗಾಂಜಾ ಅಡ್ಡೆ ಮೇಲೆ ದೊಡ್ಡಪೇಟೆ ಪೊಲೀಸರ ದಾಳಿ: 2 ಕೆಜಿಗೂ ಅಧಿಕ ಗಾಂಜಾ ಜಪ್ತಿ

ಇದನ್ನೆಲ್ಲ ತಿಳಿದುಕೊಳ್ಳುವ ಮೊದಲು ಆಟೋ ಪ್ರಿಪೇಯ್ಡ್ ಕೌಂಟರ್ ಎಂದರೇನು ಮತ್ತು ಅದರ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳೋಣ.

ಆಟೋ ಪ್ರಿಪೇಯ್ಡ್ ಕೌಂಟರ್ ಎಂದರೇನು?

ಪ್ರಯಾಣಿಕರು ಆಟೋ ಹತ್ತುವ ಮೊದಲೇ ನಿಗದಿತ ದರವನ್ನು ಪಾವತಿಸಿ ರಸೀದಿ ಪಡೆಯುವ ಒಂದು ವ್ಯವಸ್ಥಿತ ಕೇಂದ್ರವನ್ನು ಆಟೋ ಪ್ರಿಪೇಯ್ಡ್ ಕೌಂಟರ್ ಎನ್ನುತ್ತಾರೆ. ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಈ ವ್ಯವಸ್ಥೆ ಆರಂಭವಾದ ನಂತರ, ಖಾಸಗಿ ಬಸ್ ನಿಲ್ದಾಣದಲ್ಲೂ ಇಂತಹದ್ದೇ ಕೌಂಟರ್ ಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 26,  2026 ರಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿಯೂ ಆಟೋ ಪ್ರಿಪೇಯ್ಡ್ ಕೌಂಟರ್ ಆರಂಭಿಸಲಾಯಿತು.

ಇದರ ಉದ್ದೇಶವೇನು?

ದರ ಪಾರದರ್ಶಕತೆ:  ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ದರದ ವಿಚಾರವಾಗಿ ನಡೆಯುವ ವಾಗ್ವಾದಗಳನ್ನು ತಡೆಯುವುದು.

ಸುರಕ್ಷಿತ ಪ್ರಯಾಣ: ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಮತ್ತು ನಗರಕ್ಕೆ ಹೊಸದಾಗಿ ಬಂದವರು ಸುರಕ್ಷಿತವಾಗಿ ನಿಗದಿತ ಸ್ಥಳ ತಲುಪಲು ಸಹಕಾರಿ.

ಶಿಸ್ತುಬದ್ಧ ವ್ಯವಸ್ಥೆ: ನಿಲ್ದಾಣದಲ್ಲಿ ಆಟೋಗಳು ಬೇಕೆಂದರಲ್ಲಿ ನಿಲ್ಲಿಸುವುದನ್ನು ತಪ್ಪಿಸಿ, ಶಿಸ್ತುಬದ್ಧ ಸರತಿ ಸಾಲನ್ನು ಜಾರಿಗೆ ತರುವುದು.

Shimoga Bus Stand ಬುಕ್ ಮಾಡುವುದು ಹೇಗೆ? ಗಮನಿಸಬೇಕಾದ ಅಂಶಗಳು

ಮೊದಲನೆಯದಾಗಿ ಆಟೋ ಕೌಂಟರ್‌ಗೆ ತೆರಳಿ ನೀವು ಹೋಗಬೇಕಾದ ಸ್ಥಳವನ್ನು ತಿಳಿಸಬೇಕು. ಅಲ್ಲಿ ನೀಡಲಾಗುವ ರಸೀದಿಯಲ್ಲಿ ನೀವು ತಲುಪಬೇಕಾದ ದೂರ ಹಾಗೂ ದರವನ್ನು ನಿಗದಿಪಡಿಸಿರುತ್ತಾರೆ. ಆದರೆ ಇಲ್ಲಿ ಒಂದು ಮುಖ್ಯ ವಿಚಾರವನ್ನು ಗಮನಿಸಬೇಕು, ಅದೇನೆಂದರೆ ನೀವು ಹೋಗಬೇಕಾದ ನಿರ್ದಿಷ್ಟ ಸ್ಥಳದ ಬದಲಾಗಿ ಕೌಂಟರ್‌ನಲ್ಲಿ ನಮೂದಿಸಲಾಗಿರುವ ಪ್ರಮುಖ ಲೊಕೇಶನ್ ಅನ್ನು ಹೇಳಬೇಕು.

ಉದಾಹರಣೆಗೆ, ನೀವು ನೀವು ಒಂದು ಬಸ್ ನಲ್ಲಿ ಶಿವಮೊಗ್ಗ ಬಸ್ ಸ್ಟ್ಯಾಂಡ್‌ನಿಂದ ಗಾಜನೂರು ಗೇಟ್‌ಗೆ ಹೋಗಬೇಕಿದ್ದರೆ, ಕಂಡಕ್ಟರ್ ಬಳಿ ಗಾಜನೂರು ಬಸ್ ಸ್ಟ್ಯಾಂಡ್ ಎಂದೇ ಹೇಳಬೇಕು. ನೀವು ಸರಿಯಾಗಿ ಗಾಜನೂರು ಗೇಟ್ ಎಂದು ಹೇಳಿದಾಗ ಅಥವಾ ಸ್ಥಳದ ಹೆಸರು ಬದಲಾದಾಗ ದರಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಆಟೋ ಕೌಂಟರ್ ನಲ್ಲಿಯೂ ಸಹ ನಂಜಪ್ಪ ಆಸ್ಪತ್ರೆಗೆ ಹೋಗಬೇಕಿದ್ದಲ್ಲಿ ಕುವೆಂಪು ಸರ್ಕಲ್ ಲೊಕೇಶನ್ ಹೇಳುವುದು ಸೂಕ್ತ, ( ತಿಳಿದಿರಲಿ ಕೆಲವೊಮ್ಮೆ ಚಾಲಕರು ಸರ್ಕಲ್​ ಲೋಕೆಷನ್​ನಲ್ಲಿಯೇ ಇಳಿಸಿ ಹೋಗುತ್ತಾರೆ, ರಿಕ್ವೆಸ್ಟ್​ ಮಾಡಿದಾಗ, ನೀವು ತಲುಪಬೇಕಾದ ಸ್ಥಳಕ್ಕೆ ಬಿಡುತ್ತಾರೆ, ಹಾಗೆಯೇ ನೀವು ತಲುಪಬೇಕಾದ ಸ್ಥಳ ಸರ್ಕಲ್​​ನ ಹತ್ತಿರವಿದ್ದಾಗ ಮಾತ್ರ ಸರ್ಕಲ್​ನ ಹೆಸರು ಹೇಳುವುದು ಉತ್ತಮ) ಇಲ್ಲದಿದ್ದರೆ ರೂಟ್ ಬದಲಾಗಿ ದರದಲ್ಲಿ ಗೊಂದಲ ಉಂಟಾಗಬಹುದು. ಟಿಕೆಟ್ ಬುಕ್ ಮಾಡುವಾಗ ಕೌಂಟರ್‌ನಲ್ಲಿ 5 ರೂಪಾಯಿ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Shimoga Bus Stand ಶಿವಮೊಗ್ಗ ಪ್ರಿಪೇಯ್ಡ್ ಕೌಂಟರ್‌ನಲ್ಲಿ ಎಷ್ಟು ದರ ನಿಗದಿಪಡಿಸಲಾಗಿದೆ

ಶಿವಮೊಗ್ಗ ಜಿಲ್ಲಾ ಪೊಲೀಸ್ (ಪಶ್ಚಿಮ ಸಂಚಾರ ಪೊಲೀಸ್ ಠಾಣೆ)

ಕನಿಷ್ಠ ದರ (1.5 ಕಿ.ಮೀ ಗೆ): ರೂ. 40.00 (ಗರಿಷ್ಠ 3 ಜನ ಪ್ರಯಾಣಿಕರು).

ನಂತರದ ಪ್ರತಿ ಕಿ.ಮೀ ಗೆ: ರೂ. 20.00 (ಗರಿಷ್ಠ 3 ಜನ ಪ್ರಯಾಣಿಕರು).

ಕಾಯುವ ದರ: ಮೊದಲ 15 ನಿಮಿಷ ಉಚಿತ, ನಂತರದ ಪ್ರತಿ 15 ನಿಮಿಷಗಳಿಗೆ ರೂ. 5.00.

ಪ್ರಯಾಣಿಕರ ಲಗೇಜ್: ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಸರಕಿನ ಜೊತೆ ಇರಬೇಕು. ಮೊದಲ 20 ಕೆ.ಜಿ ವರೆಗೆ ಉಚಿತ, ನಂತರ ಪ್ರತಿ 20 ಕೆ.ಜಿ ಗೆ ರೂ. 5.00.

ರಾತ್ರಿ ದರ: ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 5:00 ರವರೆಗೆ ನಿಗದಿತ ದರದ ಒಂದೂವರೆ ಪಟ್ಟು (1.5x) ಪಡೆಯಲು ಅವಕಾಶವಿದೆ.

ವರದಿ : ಪ್ರತಾಪ್​ ತೀರ್ಥಹಳ್ಳಿ

Shimoga Bus Stand Prepaid Auto Counter

Shimoga Bus Stand Prepaid Auto Counter
Shimoga Bus Stand Prepaid Auto Counter
shivamogga car decor sun control house
shivamogga car decor sun control house