ಭದ್ರಾವತಿಯ ಆರ್.ಎ.ಎಫ್ ಮೈದಾನದಲ್ಲಿ ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ: ಪರಿಸ್ಥಿತಿ ನಿಯಂತ್ರಿಸಿದ್ದೇಗೆ ಪೊಲೀಸರು?

Bhadravathi RAF Ground ಭದ್ರಾವತಿಯ ಆರ್.ಎ.ಎಫ್ ಮೈದಾನದಲ್ಲಿ ಶಾಂತಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಲು ಕಾರಣವೇನು? ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದೇಕೆ? ಪೊಲೀಸರು ನಡೆಸಿದ ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರೆಷ್ಟು? ಶಿವಮೊಗ್ಗ ಜಿಲ್ಲೆ ಪೊಲೀಸರು ಗಲಭೆ ನಿಯಂತ್ರಣಕ್ಕೆ ಏನೆಲ್ಲ ಸಿದ್ಧತೆ ಕೈಗೊಂಡಿದ್ದಾರೆ?

ಭದ್ರಾವತಿಯ ಆರ್.ಎ.ಎಫ್ ಮೈದಾನದಲ್ಲಿ ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ; ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಪ್ರಯೋಗ

ಭದ್ರಾವತಿಯ ಆರ್.ಎ.ಎಫ್ ಮೈದಾನ ನಿನ್ನೆ ಅಕ್ಷರಶಃ ರಣಾಂಗಣವಾಗಿತ್ತು; ಹಿಂಸಾಚಾರ ಬುಗಿಲೆದ್ದಿತ್ತು. ಅಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಯುದ್ಧವೇ ನಡೆದುಹೋಯಿತು. ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾಗ, ಇದ್ದಕ್ಕಿದ್ದಂತೆ ಪರಿಸ್ಥಿತಿ ಹಿಂಸಾರೂಪಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬರುವಂತೆ ಕಾಣಲೇ ಇಲ್ಲ. ಸಿಚುವೇಷನ್ ಕಂಟ್ರೋಲ್ ಮಾಡಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿ, ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾಕಾರರು ಇದಕ್ಕೆ ಬೆದರದೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ, ಪೊಲೀಸರ ಪಿತ್ತ ನೆತ್ತಿಗೇರಿತ್ತು. ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು, ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದರು. ಆದರೆ ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಮುನ್ನುಗ್ಗಲು ಯತ್ನಿಸಿದಾಗ ಜಲಫಿರಂಗಿ ಪ್ರಯೋಗಿಸಲಾಯಿತು. ಇದಕ್ಕೂ ಪ್ರತಿಭಟನಾಕಾರರು ಬಗ್ಗದಿದ್ದಾಗ, ಪೊಲೀಸರು ಗೋಲಿಬಾರ್ ನಡೆಸಿದರು. ಗಲಭೆಯಲ್ಲಿ ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾದವು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು.

ಹೌದು, ಭದ್ರಾವತಿಯ ಆರ್.ಎ.ಎಫ್ ಮೈದಾನದಲ್ಲಿ ನಡೆದ ಗಲಭೆ ದಾರಿಹೋಕರಿಗೆ ಹಾಗೂ ಸಾರ್ವಜನಿಕರಿಗೆ ಕ್ಷಣಕಾಲ ದಂಗು ಬಡಿಸಿತ್ತು.

ಆರ್.ಎ.ಎಫ್ ರಂಗಮಂಟಪದಲ್ಲಿ ಪೊಲೀಸರ ನಟನೆ; ಕಣ್ಣಿಗೆ ಕಟ್ಟುವಂತೆ ಪ್ರದರ್ಶನ ನೀಡಿದ್ದಕ್ಕೆ ಶ್ಲಾಘನೆ

ಶಿವಮೊಗ್ಗ ಜಿಲ್ಲೆ ಹೇಳಿಕೇಳಿ ಕೋಮುಗಲಭೆಯ ಅತಿಸೂಕ್ಷ್ಮ ಪ್ರದೇಶ. ಇಲ್ಲಿ ಯಾವ ಸಂದರ್ಭದಲ್ಲಿ ಪರಿಸ್ಥಿತಿ ಹಿಂಸಾರೂಪಕ್ಕೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೋಮುಗಲಭೆ ನಡೆದರೆ ಸಾವು-ನೋವು ಗ್ಯಾರಂಟಿ, ಗೋಲಿಬಾರ್ ಕೂಡ ಗ್ಯಾರಂಟಿ. ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಇಂತಹ ಸಹಜ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬ ಉದ್ದೇಶದಿಂದ ನಡೆಸಿದ ರಂಗ ಪ್ರಯೋಗವೇ ‘ಮಾಬ್ ಆಪರೇಷನ್’ ಅಂದರೆ ಗುಂಪು ನಿಯಂತ್ರಣ ಮತ್ತು ಗಲಭೆ ನಿಯಂತ್ರಣ.

ದಿನಾಂಕ 20-02-2026ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಆರ್.ಎ.ಎಫ್ 97 ಬೆಟಾಲಿಯನ್ ಭದ್ರಾವತಿ ಇವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆಯ 33 ಪೊಲೀಸ್ ಠಾಣೆಗಳು, ಆರ್.ಎ.ಎಫ್ ಘಟಕ, ಡಿ.ಎ.ಆರ್ ಘಟಕದ ಪಿಸಿ/ಹೆಚ್‌ಸಿ/ಎಎಸ್‌ಐ/ಪಿಎಸ್‌ಐ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗೆ ತುರ್ತು ಸಂದರ್ಭಗಳಲ್ಲಿ “ಗುಂಪು ನಿಯಂತ್ರಣ” (Crowd Control) ಮತ್ತು “ಗಲಭೆ ನಿಯಂತ್ರಿಸುವ” (Anti Riot Drill) ಕಾರ್ಯಾಗಾರವನ್ನು ಎಂ.ಪಿ.ಎಂ ಆವರಣ ಮತ್ತು ಆರ್.ಎ.ಎಫ್ ಮೈದಾನ ಭದ್ರಾವತಿಯಲ್ಲಿ ಒಳಾಂಗಣ ಹಾಗೂ ಹೊರಾಂಗಣ ತರಗತಿ, ಪ್ರಾತ್ಯಕ್ಷಿಕೆಯೊಂದಿಗೆ ಅಣಕು ಪ್ರದರ್ಶನದ ಮೂಲಕ ತರಬೇತಿ ನೀಡಲಾಯಿತು.

Bhadravathi RAF Ground Realistic Riot Simulation
Bhadravathi RAF Ground Realistic Riot Simulation

ಹೀಗಾಗಿ ಭದ್ರಾವತಿಯ ಆರ್.ಎ.ಎಫ್ ಮೈದಾನ ನಿನ್ನೆ ಪ್ರಧಾನ ರಂಗಮಂಟಪವಾಗಿ ಮಾರ್ಪಟ್ಟಿತ್ತು. ಗಲಭೆಯಲ್ಲಿ ಪ್ರತಿಭಟನಾಕಾರರಾಗಿ ತರಬೇತಿ ನಿರತ ಪೊಲೀಸರು ಪಾಲ್ಗೊಂಡಿದ್ದರು. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಜ್ಜಾಗಿದ್ದರು. ಸುಮಾರು 300ಕ್ಕೂ ಹೆಚ್ಚು ಪೊಲೀಸರು ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು. ನೈಜ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಮಾಡಲು ಎಸ್ಪಿ ನಿಖಿಲ್ ಬಿ ರವರು, ಗಲಭೆ ಸನ್ನಿವೇಶ ಹೇಗಿರುತ್ತದೆಯೋ ಹಾಗೆಯೇ ಪಾತ್ರಗಳನ್ನು ಹಾಗೂ ದೃಶ್ಯಗಳನ್ನು ಸೃಷ್ಟಿಸುವಲ್ಲಿ ಶ್ರಮ ಹಾಕಿದ್ದರು. ಒಂದೆಡೆ ಪ್ರತಿಭಟನಾಕಾರರು, ಮತ್ತೊಂದೆಡೆ ಶಸ್ತ್ರಸಜ್ಜಿತ ಪೊಲೀಸರು, ಜೀಪುಗಳು, ವಾಹನಗಳು, ಅಗ್ನಿಶಾಮಕ ವಾಹನಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಅಕ್ಷರಶಃ ಅದು ಒಂದು ಗಲಭೆಯ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.

Bhadravathi RAF Ground ಮೈದಾನದಲ್ಲಿ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪರಿ ನೈಜ ಹೋರಾಟಗಾರರನ್ನು ನಾಚಿಸುವಂತಿತ್ತು. ಪ್ರತಿಭಟನಾಕಾರರು ಪೊಲೀಸರತ್ತಲೇ ಘೋಷಣೆಗಳನ್ನು ಕೂಗಿಕೊಂಡು ಬರುತ್ತಿದ್ದಾಗ, ಪೊಲೀಸರು ಮೊದಲು ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂಬುದೇ ಇಲ್ಲಿ ಕಲಿಯಬೇಕಾದ ಪ್ರಮುಖ ಅಂಶವಾಗಿತ್ತು. ಪೊಲೀಸರೇ ಪ್ರತಿಭಟನೆಯ ಪಾತ್ರಧಾರಿಗಳಾಗಿದ್ದರೆ, ರಿಯಲ್ ಪೊಲೀಸರು ಹಾಗೂ ಆರ್.ಎ.ಎಫ್ ಸಿಬ್ಬಂದಿ ಸಮವಸ್ತ್ರದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಶಸ್ತ್ರಸಜ್ಜಿತರಾಗಿ ನಿಂತಿದ್ದರು. ಪ್ರತಿಭಟನಾಕಾರರು ಧಿಕ್ಕಾರ ಕೂಗುತ್ತಾ ಬರುವಾಗ ಪರಿಸ್ಥಿತಿ ಕೈಮೀರಿ ಹೋಗುತ್ತದೆ; ಪೊಲೀಸರು ಈ ಸಂದರ್ಭದಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು, ಮೊದಲು ಗಲಭೆಯಾಗದಂತೆ ಹೇಗೆ ಎಚ್ಚರಿಕೆ ನೀಡಬೇಕು, ಪ್ರತಿಭಟನಾಕಾರರಿಗೆ ವಾಪಸ್ ಹೋಗುವಂತೆ ಹೇಗೆ ಹೇಳಬೇಕು ಮತ್ತು ಹೇಗೆ ತಾಳ್ಮೆ ಕಳೆದುಕೊಳ್ಳಬಾರದು ಎಂಬುದನ್ನು ಇಲ್ಲಿ ವಿವರಿಸಲಾಗಿತ್ತು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರೆ ಅದಕ್ಕೆ ಪೊಲೀಸ್ ಪ್ರತಿಕ್ರಿಯೆ ಹೇಗಿರಬೇಕು ಎಂಬ ಬಗ್ಗೆಯೂ ತಾಲೀಮು ನಡೆಸಲಾಯಿತು. ಈ ಸನ್ನಿವೇಶದಲ್ಲಿ ಟಿಯರ್ ಗ್ಯಾಸ್ ಎಸೆಯುವುದರಿಂದ ಹಿಡಿದು ಲಾಠಿ ಬೀಸುವವರೆಗೆ ಯಾರ್ಯಾರು ಯಾವ ಜವಾಬ್ದಾರಿ ನಿಭಾಯಿಸಬೇಕು ಎಂಬುದು ಮುಖ್ಯ. ಇಂತಹ ಸಂದರ್ಭದಲ್ಲಿ ಗೊಂದಲವುಂಟಾದರೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಹಾಗೂ ಪ್ರಾಣಹಾನಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗಿ ಈ ಪಾತ್ರದ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು.

ಶಾಂತಿಯುತ ಪರಿಸ್ಥಿತಿಯಿಂದ ಹಿಡಿದು ಗಲಭೆ ಪೀಡಿತ ಪರಿಸ್ಥಿತಿಯವರೆಗೆ ಅಣಕು ಪ್ರಾತ್ಯಕ್ಷಿಕೆಗೆ ವೇದಿಕೆ ಸಜ್ಜುಗೊಳಿಸಲಾಗಿತ್ತು. ಪರಿಸ್ಥಿತಿ ಕೈಮೀರಿದರೆ ಜಲಫಿರಂಗಿ ಪ್ರಯೋಗ ಮಾಡುವುದು, ಗೋಲಿಬಾರ್ ನಡೆಸುವಾಗ ಯಾರ ಆದೇಶ ಪಾಲನೆ ಮಾಡಬೇಕು, ಗೋಲಿಬಾರ್ ನಂತರ ಗಾಯಾಳುಗಳಿಗೆ ಹೇಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಪೊಲೀಸರು ನಡೆಸಿದ ರಂಗ ತಾಲೀಮು ಅಕ್ಷರಶಃ ಭದ್ರಾವತಿಯಲ್ಲಿ ಗಲಭೆಯೊಂದು ನಡೆದುಹೋಯಿತಾ ಎನ್ನುವ ಸನ್ನಿವೇಶವನ್ನು ಸೃಷ್ಟಿಸಿತ್ತು.

ಗಲಭೆ ನಿಯಂತ್ರಿಸಬೇಕಾದ ಸನ್ನಿವೇಶದಲ್ಲಿ ಮೊದಲು ಯಾರ್ಯಾರು ಯಾವ ಕರ್ತವ್ಯ ನಿರ್ವಹಿಸಬೇಕು ಎಂಬುದನ್ನು ಪೊಲೀಸರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ಈ ‘ಮಾಬ್ ಆಪರೇಷನ್’ನಲ್ಲಿ ಅಡಗಿದೆ. ಗಲಭೆಯಾದಾಗ ಏಕಾಏಕಿ ಲಾಠಿ ಬೀಸುವುದಕ್ಕಿಂತ ಮೊದಲು ಪ್ರತಿಭಟನಾಕಾರರನ್ನು ಮನವೊಲಿಸಬೇಕು, ಎಚ್ಚರಿಕೆ ನೀಡಬೇಕು; ಅದಕ್ಕೆ ಅವರು ಜಗ್ಗದಿದ್ದಾಗ ಕಾನೂನು ಸುವ್ಯವಸ್ಥೆ ಹದಗೆಡದಂತೆ ಯಾವ ಯಾವ ದಂಡ ಪ್ರಯೋಗ ಮಾಡಬೇಕೆಂಬುದನ್ನು ಪೊಲೀಸರಿಗೆ ಪ್ರಾತ್ಯಕ್ಷಿಕೆಯಲ್ಲಿ ತರಬೇತಿ ನೀಡಲಾಯಿತು. ಸೆಕ್ಷನ್ 144ರಿಂದ ಹಿಡಿದು ಗೋಲಿಬಾರ್ ವರೆಗೆ ಪೊಲೀಸರು ಹೇಗೆ ಪರಿಸ್ಥಿತಿ ನಿಯಂತ್ರಿಸಬೇಕು ಎಂಬ ಉದ್ದೇಶದಿಂದಲೇ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

Bhadravathi RAF Ground Realistic Riot Simulation
Bhadravathi RAF Ground Realistic Riot Simulation

ರಾಜ್ಯದ ಅತ್ಯಂತ ಸೂಕ್ಷ್ಮ ಜಿಲ್ಲೆಗಳಲ್ಲಿ ಈ ರೀತಿಯ ಮಾಬ್ ಆಪರೇಷನ್ ಡೆಮೋ ಮಾಡಿದರೆ ಪೊಲೀಸರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಕೆಲವು ಪೊಲೀಸರು ವೃತ್ತಿ ಜೀವನದಲ್ಲಿ ಸೆಕ್ಷನ್, ಕರ್ಫ್ಯೂ ವಾತಾವರಣವನ್ನೇ ನೋಡದೆ ನಿವೃತ್ತಿಯಾಗಿರುತ್ತಾರೆ. ನಿಜಕ್ಕೂ ಕರ್ಫ್ಯೂ ವಾತಾವರಣ ಹೇಗಿರುತ್ತದೆ ಮತ್ತು ಆ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವುದು ಹೇಗೆ ಎಂಬುದು ಕೂಡ ಬಹಳಷ್ಟು ಮಂದಿಗೆ ಗೊತ್ತಿರುವುದಿಲ್ಲ. ಅದೇ ರೀತಿ ಕೋಮುಗಲಭೆ ಎಂಬುದು ಯೋಜಿತ ಕಾರ್ಯಾಚರಣೆಯಲ್ಲ (Planned Operation); ಅದು ಇದ್ದಕ್ಕಿದ್ದಂತೆ ಸಮಾಜವನ್ನು ಅಶಾಂತಿಯತ್ತ ಕೊಂಡೊಯ್ಯಬಲ್ಲ ಗಾಳಿಮಾತು. ಶಾಂತವಾಗಿ ನಡೆಯುವ ಪ್ರತಿಭಟನೆಯಲ್ಲಿ ರಕ್ತಕ್ರಾಂತಿಯಾದರೂ ಅಚ್ಚರಿ ಪಡಬೇಕಾಗಿಲ್ಲ. ಇಂತಹ ಪರಿಸ್ಥಿತಿಯ ನಿಯಂತ್ರಣದ ತರಬೇತಿ ಇಂದಿನ ಪೊಲೀಸರಿಗೆ ಅತ್ಯಗತ್ಯವಾಗಿದೆ. ಶಿವಮೊಗ್ಗ ಜಿಲ್ಲೆಯ ಬಹುತೇಕ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಬೇತಿ ಪಡೆದಿದ್ದು ಹೆಚ್ಚಿನ ಅನುಕೂಲವಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ರೀತಿಯ “ಗುಂಪು ನಿಯಂತ್ರಣ” (Crowd Control) ಮತ್ತು “ಗಲಭೆಗಳನ್ನು ನಿಯಂತ್ರಿಸುವ” (Anti Riot Drill) ಡೆಮೋ ನಡೆಯಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಪೊಲೀಸರು ಕಣ್ಣಿಗೆ ಕಟ್ಟುವಂತೆ ಸನ್ನಿವೇಶ ಸೃಷ್ಟಿಸಿ ನಡೆಸಿದ ಮಾಬ್ ಡೆಮೋ ನೈಜ ಚಿತ್ರಣವನ್ನು ಹೋಲುತ್ತಿತ್ತು.

Bhadravathi RAF Ground Realistic Riot Simulation

shivamogga car decor sun control house
shivamogga car decor sun control house