ಮಲೆನಾಡು ಟುಡೆ ಸುದ್ದಿ / ಸಾಗರ /ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಗೂಡ್ಸ್ ಆಟೋ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 8 ವರ್ಷದ ತನ್ಮಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಾಗರ ತಾಲೂಕಿನ ಆನಂದಪುರ ಸಮೀಪದ ದಾಸಕೊಪ್ಪ ಗ್ರಾಮದ ಪ್ರಶಾಂತ್ ಅವರ ಪುತ್ರ ತನ್ಮಯ್ (8) ಮೃತಪಟ್ಟ ಬಾಲಕ.
ಸೆಪ್ಟೆಂಬರ್ 27ರ ಸಂಜೆ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನದ ಬಳಿ ಅಪಘಾತ ಸಂಭವಿಸಿತ್ತು. ರಸ್ತೆ ಬದಿಯಲ್ಲಿ ನಿಂತಿದ್ದ ತನ್ಮಯ್‌ಗೆ ಗೂಡ್ಸ್ ಆಟೋ ಡಿಕ್ಕಿಯಾಗಿದ್ದು, ಆಟೋದ ಗ್ರಿಲ್ ತಲೆಯ ಭಾಗಕ್ಕೆ ಬಡಿದ ಪರಿಣಾಮ ಗಂಭೀರ ಗಾಯವಾಗಿತ್ತು. ಗಾಯಗೊಂಡ ತನ್ಮಯ್‌ನನ್ನು ಕುಟುಂಬಸ್ಥರು ಕೂಡಲೇ ಆನಂದಪುರ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತ ನಡೆದ 6 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ತನ್ಮಯ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
