ನೈಟ್‌ ರೌಂಡ್ಸ್‌ ಜೊತೆ ಟ್ರಾಫಿಕ್‌ ಪೊಲೀಸರ ಗಾರೆ ಕೆಲಸ! ಇದನ್ನ ನೀವು ಲೈಕ್‌ ಮಾಡ್ಲೇಬೇಕು!?

ಹಂಚಿಕೊಳ್ಳಿ
WhatsApp Facebook X Telegram
ನೈಟ್‌ ರೌಂಡ್ಸ್‌ ಜೊತೆ ಟ್ರಾಫಿಕ್‌ ಪೊಲೀಸರ ಗಾರೆ ಕೆಲಸ! ಇದನ್ನ ನೀವು ಲೈಕ್‌ ಮಾಡ್ಲೇಬೇಕು!?

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 29, 2025 ‌‌ ‌‌

ನಮ್ಮ ಶಿವಮೊಗ್ಗ ಸಂಚಾರಿ ಪೊಲೀಸರು ಆಗಾಗ ಜೋರು ಸುದ್ದಿಯಾಗುತ್ತಿರುತ್ತಾರೆ. ಒಂದು ಕಡೆ ದುಬಾರಿ ದಂಡಕ್ಕೆ ಹೆಸರುವಾಸಿಯಾಗಿರುವ ಸಂಚಾರಿ ಪೊಲೀಸರು ಇನ್ನೊಂದು ಟ್ರಾಫಿಕ್‌ ಜಾಗೃತಿ ವಿಚಾರದಲ್ಲಿಯು ವಿಶೇಷವಾದ ಹೆಜ್ಜೆಗಳನ್ನು ಇಟ್ಟು ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ನಿನ್ನೆ ದಿನ ಶಿವಮೊಗ್ಗ ನಗರದಲ್ಲಿ ಪಶ್ಚಿಮ ಸಂಚಾರಿ ಪೊಲೀಸರು ಸಣ್ಣದೊಂದು ಪ್ರಯತ್ನದ ಮೂಲಕ, ಇಡೀ ಶಿವಮೊಗ್ಗದ ಗಮನಸೆಳೆದಿದ್ದಾರೆ. 

ಪೊಲೀಸರು ಮಾಡಿದ ಕೆಲಸ ಹೇಳುವುದಕ್ಕೂ ಮೊದಲು, ಆ ಕೆಲಸದ ಅನಿವಾರ್ಯತೆ ಏಷ್ಟಿತ್ತು ಎಂದು ವಿವರಿಸಬೇಕಿದೆ. ನಗರದ ಸೀನಪ್ಪ ಶೆಟ್ಟಿ ಸರ್ಕಲ್‌ (ಗೋಪಿ ಸರ್ಕಲ್‌)ಗೆ ಅಮಿರ್‌ ಅಹಮದ್‌ ಸರ್ಕಲ್‌ ನಿಂದ ಹೋಗುವ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ ಒಂದು ಗುಂಡಿ ಸಿಗುತ್ತದೆ. ಮಜಬೂತಾಗಿದ್ದ ಕಾಂಕ್ರಿಟ್‌ ರಸ್ತೆಯಲ್ಲಿಯು ರಸ್ತೆ ಗುಂಡಿ ಅಂದರೆ ಸಿಮೆಂಟ್‌ ರಸ್ತೆಗೆ ಅವಮಾನ. ಆದರೆ ಸ್ಮಾರ್ಟ್‌ ಸಿಟಿಯ ಅಧಿಕಾರಿಗಳಿಗೆ ಈ ಅವಮಾನ ಕಾಣಿಸಿರಲಿಲ್ಲ. ಕಾಂಕ್ರಿಟ್‌ ರಸ್ತೆಯನ್ನು ಕೊರೆದು ಗುಂಡಿ ಮಾಡಿದವರು ಸಹ ಅದನ್ನು ನೀಟಾಗಿ ಮುಚ್ಚುವ ಕೆಲಸ ಮಾಡುವ ಯೋಚನೆ ಸಹ ಮಾಡಿಲ್ಲ. 

ಆದರೆ, ರಶ್‌ ಅವರ್‌ನಲ್ಲಿ ವಾಹನಗಳು ಇಲ್ಲಿ ಸಂಚರಿಸುವಾಗ, ಅದರ ಸವಾರರಿಗೆ ಒಂದ್ಸಲ ಗುಂಡಿಗೆ ಬಿದ್ದು ಮೇಲಕ್ಕೆ ಬಂದ  ಅನುಭವ ತಂದುಕೊಡುತ್ತಿತ್ತು ಈ ಗುಂಡಿ. ಈ ನಡುವೆ ಒಂದಿಷ್ಟು ಜಲ್ಲಿ ಮಿಕ್ಸ್‌ ಹಾಕಿ ಗುಂಡಿ ಮುಚ್ಚಲಾಗಿತ್ತಾದರೂ, ಅದು ಮತ್ತೆ ಬಾಯಿಕಳೆದುಕೊಂಡಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ತಾವೇ ಖುದ್ದಾಗಿ ಸಂಚಾರಿ ಪೊಲೀಸರು ತಡರಾತ್ರಿ ಕರ್ನೆ, ಬಾಣಲಿ, ಮಟ್ಟಗೋಲು ಹಿಡಿದು ಒಂದಿಷ್ಟು ಕಾಂಕ್ರಿಟ್‌ ತಂದು ಹಾಕಿ, ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ. ಯೂನಿಫಾರಮ್‌ನಲ್ಲಿಯೇ ನೈಟ್‌ ರೌಂಡ್ಸ್‌ ಡ್ಯೂಟಿ ಮಾಡುತ್ತಾ, ಪೊಲೀಸರು ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡಿದ್ದಾರೆ. 

ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್ ಎ ಎಸ್ ಐ ಮೋಹನ್ ಕುಮಾರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ದಿನೇಶ್ ಕುಮಾರ್  ಗೋಪಿ ಸರ್ಕಲ್ ನಲ್ಲಿ  ಬಿದ್ದ ಗುಂಡಿಗಳನ್ನು ಮುಚ್ಚುತ್ತಿರುವ ವಿಡಿಯೋ ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ಲೋಡ್‌ ಆಗಿದೆ. ಮಾಡಿದ ಕೆಲಸವನ್ನು ಹೇಳದೆ ತಿರುಗುವಂತಹ ಕಾಲ ಇದಲ್ಲ. ಮಾಡಿದ್ದನ್ನ ಹೇಳಿಕೊಂಡರೂ ಹೊಗಳದ ಟೈಂನಲ್ಲಿ ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ವಿಡಿಯೋ ಸಿಟಿ ಜನರ ಲೈಕ್‌ ಪಡೆದುಕೊಳ್ತಿದೆ. 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor