ಮಲೆನಾಡು ಟುಡೆ ಸುದ್ದಿ / ಕಾರ್ಗಲ್ / ಕಳೆದೊಂದು ವಾರದಲ್ಲಿ ನೀರಿಗೆ ಹಾರಿದವರ ಸುದ್ದಿ ಶಿವಮೊಗ್ಗದಲ್ಲಿ ಗುಯ್ ಅನಿಸುತ್ತಿದೆ. ಇದರ ನಡುವೆ ನೀರಿಗೆ ಬಿದ್ದ ಯುವತಿಯೊಬ್ಬಳನ್ನ ಕಾರ್ಗಲ್ ಪೊಲೀಸ್ ಠಾಣೆ (Kargal Police) ವ್ಯಾಪ್ತಿಯಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಬಿದರೂರು ಚಾನಲ್ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ERSS-112 ಹಾಗೂ ಕಾರ್ಗಲ್ ಪೊಲೀಸ್ ಠಾಣೆ ಸಿಬ್ಬಂದಿ ಸೇವ್ ಮಾಡಿದ್ದಾರೆ. ಘಟನೆ ವಿವರ ಹೀಗಿದೆ.
ಸ್ಥಳೀಯ ಪೊಲೀಸ್ ಮಾಹಿತಿ ಪ್ರಕಾರ, ನಿನ್ನೆ ದಿನ ಅಂದರೆ ಆಗಸ್ಟ್ 26ರ ಸಂಜೆ ಬಿದರೂರು ಚಾನಲ್ ಬಳಿ ಮೀನು ಹಿಡಿಯುತ್ತಿದ್ದವರು, ಪೊಲೀಸರಿಗೆ ಕರೆಮಾಡಿದ್ದಾರೆ. ಇಲ್ಲೊಬ್ಬಳು ಯುವತಿ ತುಂಬಾ ಹೊತ್ತಿನಿಂದ ಓಡಾಡುತ್ತಿದ್ದಾಳೆ. ಆಕೆಯ ನಡೆ ಸಂಶಯವಾಗಿದೆ ಎಂದಿದ್ದಾರೆ. ಅಲ್ಲದೆ ಆಕೆ ಸಾಯಲು ಬಂದಿರಬಹುದು ಎಂದಿದ್ದಾರೆ. ಹೀಗಾಗಿ ಕಾರ್ಗಲ್ ಪೊಲೀಸ್ ಠಾಣೆ ಹಾಗೂ ERSS-112 ಸಿಬ್ಬಂದಿ ಅಜ್ಜಪ್ಪ ಹೆಚ್.ಸಿ., ಚಾಲಕ ರಾಘವೇಂದ್ರ ಎ.ಪಿ.ಸಿ., ಡಿವಿಆರ್ ಶಿವಮೊಗ್ಗ ಹಾಗೂ ಕಾರ್ಗಲ್ ಪೊಲೀಸ್ ಠಾಣೆಯ ಸಂದೀಪ್ ಸಿ.ಹೆಚ್.ಸಿ. ಮತ್ತು ಮರುಳಸೋಮಪ್ಪ ಸಿ.ಪಿ.ಸಿ. ಸ್ಥಳಕ್ಕೆ ದೌಡಾಯಿಸಿದ್ರು
ಇತ್ತ ಪೊಲೀಸರನ್ನ ನೋಡುತ್ತಲೇ, ತನ್ನನ್ನೆ ಹಿಡಿಯಲು ಬಂದರು ಎಂದುಕೊಂಡ ಯುವತಿ ಚಾನಲ್ಗೆ ಹಾರಲು ಮುಂದಾಗಿದ್ದಾಳೆ. ಅಷ್ಟರಲ್ಲಿಯೇ ಆಕೆಯನ್ನ ಹಿಡಿದ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ತನ್ನ ಸ್ನೇಹಿತೆಯೊಂದಿಗೆ ಜೋಗಕ್ಕೆ ಬಂದಿದ್ದ ಯುವತಿ, ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾಳೆ.
ಆನಂತರ ಸ್ಟೇಷನ್ ಹೌಸ್ ಆಫೀಸರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಕೆಯನ್ನ ಸಮಾಧಾನ ಪಡಿಸಿ ಆಕೆಯ ಪೋಷಕರನ್ನು ಸಂಪರ್ಕಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವಂತೆ ತಿಳಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಇತ್ತ ಶಿವಮೊಗ್ಗ ಪೊಲೀಸ್ ಇಲಾಖೆ ERSS-112 ಮತ್ತು ಕಾರ್ಗಲ್ ಪೊಲೀಸ್ ಠಾಣೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ
