ಶಿವಮೊಗ್ಗ : ರಾಜ್ಯ ರಾಜಕಾರಣದ ಸದ್ಯದ ವಿದ್ಯಮಾನಗಳು, ಸಚಿವ ಸಂಪುಟ ವಿಸ್ತರಣೆ ಹಾಗೂ ಕಂಬಳ ಕ್ರೀಡೆ ಕುರಿತಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶಿವಮೊಗ್ಗದಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
UT Khader ಸಂಪುಟ ವಿಸ್ತರಣೆ ವಿಳಂಬ, ನಾವು ಡಬಲ್ ಕೆಲಸ ಮಾಡ್ತಿದ್ದೇವೆ
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತು ಉತ್ತರಿಸಿದ ಸಚಿವರು, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಈಗ ಇರುವ ಸಚಿವರೇ ಎರಡು ಪಟ್ಟು ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಾರ್ವಜನಿಕರಿಗೆ ಹಾಗೂ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಎಲ್ಲೂ ಯಾವುದೇ ರೀತಿಯ ಕುಂಠಿತವಾಗದಂತೆ ನಾವು ಜವಾಬ್ದಾರಿಯಿಂದ ನೋಡಿಕೊಂಡಿದ್ದೇವೆ ಎಂದರು.
UT Khader ಮೈಸೂರು ದಸರಾದಲ್ಲಿ ಕಂಬಳ ವಿವಾದ, ಖಾದರ್ ಹೇಳಿದ್ದೇನು?:
ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ಆಯೋಜನೆಗೆ ಕೇಳಿಬರುತ್ತಿರುವ ಅಪಸ್ವರದ ಕುರಿತು ಮಾತನಾಡಿದ ಅವರು, ದಸರಾ ಹೇಗೆ ನಡೆಯಬೇಕು ಎಂಬುದನ್ನು ದಸರಾ ಸಮಿತಿ ಹಾಗೂ ಸಿಎಂ ನಿರ್ಧರಿಸುತ್ತಾರೆ. ಆದರೆ, ಕಂಬಳ ಎಂಬುದು ಕೇವಲ ಕ್ರೀಡೆಯಲ್ಲ, ಅದು ಕರಾವಳಿ ಹಾಗೂ ಇಡೀ ಕರ್ನಾಟಕದ ಹೆಮ್ಮೆಯ ಸಂಪ್ರದಾಯ ಮತ್ತು ಪರಂಪರೆ. ಕಂಬಳದ ಅಭಿಮಾನಿಯಾಗಿ ನಾನು ಹೇಳುವುದಾದರೆ, ಕಂಬಳ ಕ್ರೀಡೆ ಎಲ್ಲಾ ಕಡೆಗಳಲ್ಲೂ ನಡೆಯಬೇಕು. ಉಳಿದಂತೆ ದಸರಾದಲ್ಲಿ ಅದರ ಆಯೋಜನೆಯ ಬಗ್ಗೆ ಸಮಿತಿಯವರೇ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.
UT Khader ಶೋಭಾ ಕರಂದ್ಲಾಜೆ ಆರೋಪಕ್ಕೆ ಕೌಂಟರ್
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರನ್ನು ಸೇರಿಸುತ್ತಿದೆ ಎಂಬ ಶೋಭಾ ಕರಂದ್ಲಾಜೆ ಅವರ ಆರೋಪವನ್ನು ಸಚಿವರು ಸಂಪೂರ್ಣವಾಗಿ ತಳ್ಳಿಹಾಕಿದರು. SIR ಪ್ರಕ್ರಿಯೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅದರ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ್ದು . ದೇಶದ ಯಾವುದೇ ಸಾಮಾನ್ಯ ನಾಗರಿಕ ಮತದಾನದ ಹಕ್ಕಿನಿಂದ ವಂಚಿತನಾಗಬಾರದು ಎಂಬುದು ನಮ್ಮ ಸರ್ಕಾರದ ಏಕೈಕ ಕಾಳಜಿ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರ ವೋಟ್ ತಪ್ಪಿಹೋಗಿತ್ತು, ಆ ಪರಿಸ್ಥಿತಿ ಕರ್ನಾಟಕದಲ್ಲಿ ಆಗಲು ನಾವು ಬಿಡುವುದಿಲ್ಲ ಎಂದರು.
ಬಿಜೆಪಿಯವರಿಗೆ ಏನಾದರೂ ಆಕ್ಷೇಪಣೆಗಳಿದ್ದರೆ ನೇರವಾಗಿ ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಿ ಆದೇಶ ಮಾಡಿಸಲಿ. ಸಾಮಾನ್ಯ ಜನರಿಗೆ ಮತದಾನದ ಹಕ್ಕು ಸಿಗಲಿ ಎಂದು ಪ್ರಮಾಣಪತ್ರ ನೀಡುವುದು ತಪ್ಪಾ ವಿರೋಧ ಪಕ್ಷದವರು ನಮ್ಮನ್ನು ಮೆಚ್ಚಲಿ ಎಂದು ನಾವು ಕಾಯುತ್ತಿಲ್ಲ. ಸರ್ಕಾರವನ್ನು ಸದಾ ಟೀಕಿಸುವುದೇ ಪ್ರತಿಪಕ್ಷಗಳಿಗೆ ದೊಡ್ಡ ಆಕ್ಸಿಜನ್ ಆಗಿದೆ. ಅವರ ರಾಜಕೀಯ ಆರೋಪಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ತಮ್ಮ ಕೆಲಸ ಮಾಡಲಿ, ನಾವು ಜನರ ಪರವಾಗಿ ನಮ್ಮ ಕೆಲಸ ಮಾಡುತ್ತೇವೆ. ಜನರೇ ನಮ್ಮನ್ನು ಮೆಚ್ಚಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
