ಶಿವಮೊಗ್ಗ ಜಿಲ್ಲೆಯ ಕುಂಸಿ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.
ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮತ್ತು ಮೃತ ಮಹಿಳೆಯ ಚಿನ್ನ, ದುಡ್ಡಿನ ಕಥೆ!
ಮೂಲತಃ ತುಮಕೂರಿನ ದಿಬ್ಬೂರು ರಸ್ತೆಯ ನಿವಾಸಿಯಾದ ಶೇಖರಪ್ಪ ಎಂಬುವವರ ಪುತ್ರ ರಾಜು (37) ಮೃತಪಟ್ಟ ದುರ್ದೈವಿ. ಕಳೆದ ಡಿಸೆಂಬರ್ 9ರಂದು ತೀವ್ರ ಎದೆಯುರಿಯಿಂದ ಬಳಲುತ್ತಿದ್ದ ಇವರು ತಾವಾಗಿಯೇ ಕುಂಸಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ಕುಂಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ಡಿಸೆಂಬರ್ 12ರಂದು ಇವರನ್ನು ಆಂಬ್ಯುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ದುರದೃಷ್ಟವಶಾತ್ ಮಾರ್ಗಮಧ್ಯೆಯೇ ರಾಜು ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಿಡಲಾಗಿದ್ದು, ಅವರ ಕುಟುಂಬ ಸದಸ್ಯರ ಭೇಟಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮೃತ ರಾಜು ಅವರು ಸುಮಾರು 5.8 ಅಡಿ ಎತ್ತರ, ದೃಢಕಾಯ ಮೈಕಟ್ಟು ಹಾಗೂ ಎಣ್ಣೆಕಪ್ಪು ಮೈಬಣ್ಣವನ್ನು ಹೊಂದಿದ್ದಾರೆ. ಸಾವಿನ ಸಮಯದಲ್ಲಿ ಇವರು ಮೆರೂನ್ ಬಣ್ಣದ ಶರ್ಟ್ ಹಾಗೂ ಕ್ರೀಮ್ ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಯಾವುದೇ ಮಾಹಿತಿ ಅಥವಾ ವಾರಸುದಾರರ ಸುಳಿವು ದೊರೆತಲ್ಲಿ ತಕ್ಷಣವೇ ಕುಂಸಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 9480803351 ಅಥವಾ 08182-261412/ 261413 ಅನ್ನು ಸಂಪರ್ಕಿಸುವಂತೆ ಇಲಾಖೆಯು ಅಧಿಕೃತವಾಗಿ ಮನವಿ ಮಾಡಿದೆ.
Unidentified Body at McGann Hospital
