ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡೋ ಕಿರಿಕಿರಿ ಇನ್ಮುಂದೆ ಬಂದ್: ರಾಘವ್ ಚಡ್ಡಾ ಎತ್ತಿದ ಧ್ವನಿಗೆ ಜಯ ? 

ಹಂಚಿಕೊಳ್ಳಿ
WhatsApp Facebook X Telegram
ಎಐ ನಿರ್ಮಿತ ಚಿತ್ರ
ಎಐ ನಿರ್ಮಿತ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ:ಸಂಸದ ರಾಘವ್ ಚಡ್ಡಾ ಅವರ ಹೆಸರು ಬಹುತೇಕರಿಗೆ ಗೊತ್ತೇ ಇರುತ್ತೆ. ಕಳೆದ ಕೆಲ ತಿಂಗಳ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿದ್ದಾಗ ಸಂಸತ್ತಿನಲ್ಲಿ ಇವರು ಎತ್ತಿದ್ದ ಅನೇಕ ಪ್ರಶ್ನೆಗಳಿಗೆ ಸಾಮಾನ್ಯ ಜನ, ಅಬ್ಬಾ! ಇದ್ದರೆ ಇಂತಹ ನಾಯಕ ಇರಬೇಕು ಅಂದುಕೊಂಡಿದ್ದು ಸುಳ್ಳಲ್ಲ. ಈಗ ಅವರ ವಿಚಾರ ಮತ್ತೆ ಮುನ್ನಲೆಗೆ ಬರಲು ಒಂದು ವಿಶೇಷ ಕಾರಣವಿದೆ. ಅದೇನೆಂದರೆ, ಈ ಹಿಂದೆ ಮೊಬೈಲ್ ರೀಚಾರ್ಜ್ ವ್ಯಾಲಿಡಿಟಿಗಳ ಬಗ್ಗೆ ಅವರು ಎತ್ತಿದ್ದ ಪ್ರಶ್ನೆಯ ಕುರಿತಾಗಿ ‘ಟ್ರಾಯ್’ (TRAI) ಕೆಲವೊಂದು ಮಹತ್ವದ ತಿದ್ದುಪಡಿಗಳನ್ನು ಮಾಡಿದೆ.

ಹೌದು, ಈ ಹಿಂದೆ ರಾಘವ್ ಚಡ್ಡಾ ಅವರು ಟೆಲಿಕಾಂ ಕಂಪನಿಗಳ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಸಾಮಾನ್ಯ ಜನರು ರೀಚಾರ್ಜ್ ಮಾಡಬೇಕೆಂದರೆ ವರ್ಷದಲ್ಲಿ 12 ತಿಂಗಳ ಬದಲಾಗಿ 13 ತಿಂಗಳಿಗೆ ರೀಚಾರ್ಜ್ ಮಾಡಬೇಕಾದ ಪರಿಸ್ಥಿತಿ ಇತ್ತು. ತಿಂಗಳಿಗೆ ಪೂರ್ಣ ದಿನಗಳ ಬದಲು 28 ದಿನ, 22 ದಿನ ಅಥವಾ 24 ದಿನಗಳ ರೀಚಾರ್ಜ್ ಪ್ಲಾನ್‌ಗಳನ್ನು ಮಾತ್ರ ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಸಾಮಾನ್ಯವಾಗಿ ಕೀಪ್ಯಾಡ್ ಮೊಬೈಲ್ ಬಳಸುವವರು ಕೇವಲ ಕರೆ ಮಾಡಲು ಹಾಗೂ ಇನ್ಕಮಿಂಗ್ ಕರೆಗಳಿಗಾಗಿ ಮಾತ್ರ ರೀಚಾರ್ಜ್ ಮಾಡಿಸಿಕೊಳ್ಳುತ್ತಾರೆ. ಆದರೆ ಕಂಪನಿಗಳು ಅಗತ್ಯವಿಲ್ಲದಿದ್ದರೂ ಅದರಲ್ಲಿ ಡೇಟಾ (ಇಂಟರ್ನೆಟ್) ಪ್ಲಾನ್ ಸೇರಿಸಿ ರೀಚಾರ್ಜ್ ಮಾಡಿಸಿಕೊಳ್ಳುವಂತೆ ಮಾಡಿ, ಗ್ರಾಹಕರಿಗೆ ಅನಗತ್ಯ ಹೊರೆ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದರು.

ರಾಘವ್ ಚಡ್ಡಾ ಎತ್ತಿದ್ದ ಈ ಪ್ರಶ್ನೆ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಅನೇಕ ಸೋಶಿಯಲ್ ಮೀಡಿಯಾ ಕ್ರಿಯೇಟರ್‌ಗಳು ಹಾಗೂ ಯೂಟ್ಯೂಬರ್‌ಗಳು ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ವೀಡಿಯೋಗಳನ್ನು ಮಾಡಿದ್ದರು. ರಾತ್ರೋರಾತ್ರಿ ರಾಘವ್ ಚಡ್ಡಾ ಅವರ ಈ ನಡೆ ವೈರಲ್ ಆಗಿ, ‘ಜೆನ್ ಜಿ’ (Gen Z) ಯುವಕರು ‘ಇಂತಹ ನಾಯಕರು ಇರಬೇಕು’ ಎಂದು ಬೆಂಬಲ ಸೂಚಿಸಿದ್ದರು. ತದನಂತರ ರಾಘವ್ ಚಡ್ಡಾ ಅವರು ಬಿಜೆಪಿ ಸೇರಿಕೊಂಡ ಮೇಲೆ ಈ ವಿಚಾರ ಅಷ್ಟಾಗಿ ಚರ್ಚೆಗೆ ಬರಲಿಲ್ಲ. ಆದರೆ ಈಗ ಮತ್ತೆ ಆ ವಿಷಯ ಮುನ್ನಲೆಗೆ ಬಂದಿದೆ.

ಇನ್ಮುಂದೆ ಎಲ್ಲರಿಗೂ ಸಿಗಲಿದೆ 30 ದಿನಗಳ ರೀಚಾರ್ಜ್ ಪ್ಲಾನ್!

ಈ ಕುರಿತು ಸ್ವತಃ ರಾಘವ್ ಚಡ್ಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಟೆಲಿಕಾಂ ಗ್ರಾಹಕರ ರಕ್ಷಣೆ (ಹದಿಮೂರನೇ ತಿದ್ದುಪಡಿ) ನಿಯಮಗಳು, 2026 ಅನ್ನು ಜಾರಿಗೆ ತಂದಿದ್ದು, ಇದರಡಿ ಗ್ರಾಹಕರಿಗೆ ಪೂರ್ಣ 30 ದಿನಗಳ ರೀಚಾರ್ಜ್ ಪ್ಲಾನ್‌ಗಳು ಸಿಗಲಿವೆ. ಇದರಿಂದ ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ, ಬದಲಿಗೆ 12 ಬಾರಿ ರೀಚಾರ್ಜ್ ಮಾಡಿದರೆ ಸಾಕು.

ಇದರೊಂದಿಗೆ, ಇಂಟರ್ನೆಟ್ ಡೇಟಾ ಅಗತ್ಯವಿಲ್ಲದವರಿಗೆ ಕೇವಲ ನಾರ್ಮಲ್ ಕಾಲ್ ಮತ್ತು ಮೆಸೇಜ್ (SMS) ಮಾತ್ರ ಲಭ್ಯವಿರುವ ಕಡಿಮೆ ವೆಚ್ಚದ ಪ್ಲಾನ್‌ಗಳು ದೊರೆಯಲಿವೆ. ಮುಖ್ಯವಾಗಿ ಸಣ್ಣ ಬಟನ್ ಫೋನ್ ಬಳಸುವ ಹಾಗೂ ಕಡಿಮೆ ಬಜೆಟ್ ಹೊಂದಿರುವ ಗ್ರಾಹಕರಿಗೆ ಇದು ಅತ್ಯಂತ ಅನುಕೂಲಕರವಾದ ಆಯ್ಕೆಯಾಗಿದೆ.

ಹಲವಾರು ಗ್ರಾಹಕರು ರೀಚಾರ್ಜ್ ಆಯ್ಕೆಗಳ ಕುರಿತು ತಮ್ಮ ಕಳವಳವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಈ ಸಂಬಂಧ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಮತ್ತು ಕೈಗೆಟುಕುವ ದರದ ಪ್ಲಾನ್‌ಗಳು ಸಿಗಬೇಕೆಂದು ನಾನು ಮಾರ್ಚ್ 11 ರಂದು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೆ. ಗ್ರಾಹಕರ ಹಿತಾಸಕ್ತಿ ಮತ್ತು ಅನುಕೂಲವನ್ನು ಪರಿಗಣಿಸಿ ಈ ಸಮಸ್ಯೆಯನ್ನು ಪರಿಹರಿಸಿರುವ ಭಾರತ ಸರ್ಕಾರ ಹಾಗೂ ಟ್ರಾಯ್ (TRAI) ಸಂಸ್ಥೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಸದ ರಾಘವ್ ಚಡ್ಡಾ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ತಿಳಿಸಿದ್ದಾರೆ.

ಯಾವಾಗ ಜಾರಿಗೆ ಬರಲಿದೆ?

ಭಾರತೀಯ ದೂರಸಂಚಾರ ನಿಯಂತ್ರಣ ಪ್ರಾಧಿಕಾರ (TRAI) ಅಧಿಕೃತವಾಗಿ ಈಗಾಗಲೇ ಟೆಲಿಕಾಂ ಗ್ರಾಹಕರ ರಕ್ಷಣೆ (ಹದಿಮೂರನೇ ತಿದ್ದುಪಡಿ) ನಿಯಮಗಳು, 2026 ಅನ್ನು ಜಾರಿಗೊಳಿಸಿದೆ.

ಇದು ಕೇಂದ್ರ ಸರ್ಕಾರದ ನಿಯಮವಾಗಿರುವುದರಿಂದ, ಭಾರತದಲ್ಲಿರುವ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು (ಉದಾಹರಣೆಗೆ Jio, Airtel, Vi ಮತ್ತು BSNL) ಈ ಹೊಸ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕಾಗುತ್ತದೆ. ಈ ನಿಯಮದ ಪ್ರಕಾರ ಕಂಪನಿಗಳು 30 ದಿನಗಳ ಮಾನ್ಯತೆಯ ಪ್ಲಾನ್‌ಗಳು ಹಾಗೂ ಕೇವಲ ಧ್ವನಿ ಕರೆ (Voice) ಮತ್ತು ಎಸ್‌ಎಮ್‌ಎಸ್ (SMS) ಮಾತ್ರವಿರುವ ಕಡಿಮೆ ದರದ ಪ್ಲಾನ್‌ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಹೊಸ ಪ್ಲಾನ್‌ಗಳು ಸಂಪೂರ್ಣವಾಗಿ ಜಾರಿಗೆ ಬರುವ ಸಾಧ್ಯತೆ ಇದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor