ಶಿವಮೊಗ್ಗ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ರೈತರೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 9,91,081 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ತಾಲೂಕಿನ ನವಲೆ ಬಳಿಯ ಹೊಸೂರಿನ ರೈತರೊಬ್ಬರು ಈ ಆನ್‌ಲೈನ್ ವಂಚನೆಗೆ ಬಲಿಯಾದವರಾಗಿದ್ದು, ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Shivamogga Farmer ಘಟನೆಯ ವಿವರ
ಹೊಸೂರಿನ ರೈತರು ತಮ್ಮ ಮೊಬೈಲ್ ಬಳಸುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅವರನ್ನು VIP ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಕುತೂಹಲದಿಂದ ರೈತರು ಆ ಗ್ರೂಪ್ ತೆರೆದು ನೋಡಿದಾಗ, ಅದರಲ್ಲಿ Zanskar Securities Pvt ಎಂಬ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಭಾರಿ ಲಾಭಾಂಶ ತಂದುಕೊಡುವುದಾಗಿ ಮೆಸೇಜ್ ಬಂದಿದ್ದವು. ಇದನ್ನು ನಿಜವೆಂದು ನಂಬಿದ ರೈತರು, ಆ ಸೈಬರ್ ವಂಚಕರನ್ನು ಸಂಪರ್ಕಿಸಿ ಅವರ ಮಾತಿನ ಜಾಲಕ್ಕೆ ಬಿದ್ದಿದ್ದಾರೆ. ಬಳಿಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 9,91,081 ರೂಪಾಯಿ ಹಣವನ್ನು ವಂಚಕರು ಸೂಚಿಸಿದ ಖಾತೆಗಳಿಗೆ ಹೂಡಿಕೆ ರೂಪದಲ್ಲಿ ವರ್ಗಾಯಿಸಿದ್ದಾರೆ.
ತಾವೂ ಹೂಡಿಕೆ ಮಾಡಿದ ಹಣ ಮತ್ತು ಅದಕ್ಕೆ ಬಂದ ಲಾಭವನ್ನು ಬ್ಯಾಂಕ್ ಖಾತೆಗೆ ಹಿಂಪಡೆಯಲು ರೈತರು ಯತ್ನಿಸಿದಾಗ ವಂಚಕರು ಅಸಲಿ ಆಟ ಶುರು ಮಾಡಿದ್ದಾರೆ. ನೀವು ಒಟ್ಟು ಮೊತ್ತವನ್ನು ವಿತ್ ಡ್ರಾ ಮಾಡಬೇಕಾದರೆ ಮೊದಲು ನಮಗೆ ಶೇಕಡಾ 20 ರಷ್ಟು ಕಮಿಷನ್ ಹಣವನ್ನು ಪಾವತಿಸಬೇಕು, ಆಗ ಮಾತ್ರ ಹಣ ಬಿಡುಗಡೆಯಾಗುತ್ತದೆ” ಎಂದು ವಂಚಕರು ತಿಳಿಸಿದ್ದಾರೆ. ಇದಕ್ಕೆ ರೈತರು, ನನ್ನ ಖಾತೆಯಲ್ಲಿರುವ ಹಣವನ್ನೇ ವಿತ್ ಡ್ರಾ ಮಾಡಲು ಅವಕಾಶ ಕೊಡಿ, ಅದರಲ್ಲಿಯೇ ನಿಮಗಾಗಬೇಕಾದ ಶೇ. 20ರಷ್ಟು ಹಣವನ್ನು ಕಡಿತಗೊಳಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಮುನಿಸುಗೊಂಡ ವಂಚಕರು ತಕ್ಷಣವೇ ಆ ನಕಲಿ ಟ್ರೇಡಿಂಗ್ ವೆಬ್ ಪೇಜ್ ಅನ್ನು ಕ್ಲೋಸ್ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾರೆ
ಇದರಿಂದ ಆತಂಕಗೊಂಡ ರೈತರು ತಕ್ಷಣ ಬೆಂಗಳೂರಿನಲ್ಲಿರುವ ಮೂಲ Zanskar Securities Pvt ಕಂಪನಿಯ ಅಧಿಕೃತ ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚಿ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ತಮ್ಮ ಕಂಪನಿಯ ಹೆಸರಿನಲ್ಲಿ ಯಾರೋ ನಕಲಿ ಜಾಲ ಸೃಷ್ಟಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಸತ್ಯ ಬೆಳಕಿಗೆ ಬಂದಿದೆ. ತಮಗೆ ನಕಲಿ ಟ್ರೇಡಿಂಗ್ ಕಂಪನಿಯವರಂತೆ ನಟಿಸಿ ನಂಬಿಕೆ ದ್ರೋಹ ಎಸಗಿರುವ ಸೈಬರ್ ಕಳ್ಳರನ್ನು ಪತ್ತೆ ಹಚ್ಚಿ, ತಮ್ಮ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಿರುವ 9,91,081ರೂಪಾಯಿ. ಹಣವನ್ನು ವಾಪಸ್ ಕೊಡಿಸಬೇಕೆಂದು ರೈತ ಪೊಲೀಸರಿಗೆ ದೂರು ನೀಡಿದ್ದಾರೆ.
