ಮಲೆನಾಡು ಟುಡೆ ಸುದ್ದಿ/ಶಿವಮೊಗ್ಗ: ಕಲಾ ದಸರಾದ ನಾಣ್ಯ ಪ್ರದರ್ಶನದಲ್ಲಿ, ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕಾರರ ಸಂಘ ಟ್ರಸ್ಟ್ ವತಿಯಿಂದ ಪುರಾತನ ಕಾಲದ ಅಪರೂಪದ ನಾಣ್ಯಗಳ ಪ್ರದರ್ಶನವನ್ನು ಅಕ್ಟೋಬರ್ 17 ಮತ್ತು 18 ರಂದು ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ತಿಳಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಅಕ್ಟೋಬರ್ 17 ರಂದು ಈ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿದ್ದು, ಮುಖ್ಯ ಅತಿತಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್. ರುದ್ರೇಗೌಡ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 17 ಮತ್ತು 18 ರಂದು ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಈ ಪ್ರದರ್ಶನ ನಡೆಯಲಿದೆ. ಮೂಡಬಿದರೆಯ ಖ್ಯಾತ ನಾಣ್ಯ ಸಂಗ್ರಾಹಕ ನಿತ್ಯಾನಂದ ಪೈ ಅವರ, ಕರ್ನಾಟಕವನ್ನು ಆಳಿದ ರಾಜ ಮಹಾರಾಜರ ಕಾಲದ ವಿಶೇಷ ನಾಣ್ಯಗಳು ಹಾಗೂ ಶಿವಮೊಗ್ಗದ ನಾಣ್ಯ ಸಂಗ್ರಾಹಕರಿಂದ ರಾಜಮಹಾರಾಜರ ಕಾಲದ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಸೀಸದ ನಾಣ್ಯಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ರಾಜಪ್ರಭುತ್ವ ಹಾಗೂ ಭಾರತದ ಅಂಚೆ ಚೀಟಿಗಳು, ಸ್ವತಂತ್ರ ಭಾರತ ಮತ್ತು ಬ್ರಿಟಿಷರ ಆಳ್ವಿಕೆಯ ಕಾಲದ ನಾಣ್ಯಗಳು, ದೇಶ-ವಿದೇಶಗಳ ನಾಣ್ಯ ಹಾಗೂ ನೋಟುಗಳು ಮತ್ತು ವಿಶೇಷವಾಗಿ ಪಾಲಿಮರ್ ನೋಟುಗಳ ಪ್ರದರ್ಶನ ಇರುತ್ತದೆ. ಇದಕ್ಕೆ ಉಚಿತ ಪ್ರವೇಶವಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯವನ್ನು ಆಳಿದ ಚಾಲುಕ್ಯರು, ಹೊಯ್ಸಳರು, ಕದಂಬರು, ಗಂಗರು, ಅಳುಪರು, ರಾಷ್ಟ್ರಕೂಟರು, ವಿಜಯನಗರ ಅರಸರು, ಮೈಸೂರು ಅರಸರು, ಟಿಪ್ಪು ಸುಲ್ತಾನ್, ಹೈದರಾಲಿ ಆಳ್ವಿಕೆಯ ನಾಣ್ಯಗಳು ಹಾಗೂ ಬನವಾಸಿಯ ಚುಟು ವಂಶಸ್ಥರ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳ ಪ್ರದರ್ಶನ ಇರುತ್ತದೆ.
ಇಷ್ಟು ಮಾತ್ರವಲ್ಲದೆ, ಭಾರತವನ್ನು ಆಳಿದ ಮೌರ್ಯರು, ಕ್ಷತ್ರಪರು, ಗುಪ್ತರು, ಶಾತವಾಹನರು, ಕುಶಾನರು, ಇಂಡೋ-ಸಾಸೇನಿಯನ್ನರು, ಹೂಣರು, ಇಂಡೋ-ಪಾರ್ಥಿಯನ್ನರು, ಇಂಡೋ-ಗ್ರೀಕರು, ರೋಮನ್ನರ ನಾಣ್ಯಗಳು ಸೇರಿದಂತೆ ವಿವಿಧ ರಾಜಮಹಾರಾಜರ ನಾಣ್ಯಗಳು ಇರಲಿವೆ. ಜೊತೆಗೆ, ಭಾರತದ ಪ್ರಥಮ ಆಹತ ಮುದ್ರೆಯ ಬೆಳ್ಳಿ ನಾಣ್ಯಗಳು, ದೆಹಲಿ ಸುಲ್ತಾನರು, ಮೊಘಲರು, ಬಹುಮನಿ ಮತ್ತು ವಿಜಾಪುರ ಸುಲ್ತಾನರ ನಾಣ್ಯಗಳು, ಬ್ರಿಟಿಷರ ಆಳ್ವಿಕೆಯ ನಾಣ್ಯಗಳು ಹಾಗೂ ಸ್ವತಂತ್ರ ಭಾರತದ ಸಂಪೂರ್ಣ ನಾಣ್ಯಗಳು ಪ್ರದರ್ಶನದಲ್ಲಿರಲಿವೆ. ಎಂದು ಮಾಹಿತಿ ನೀಡಿದರು.
