ಜಿಲ್ಲಾಧಿಕಾರಿ ಕಚೇರಿ ಕಟ್ಟೆ ಮೇಲೆ ವಿದ್ಯಾರ್ಥಿಗಳ ಒಕ್ಕೊರಲ ಕೂಗು! ಪದವೀಧರರ ಈ ಕೋರಿಕೆ ಈಡೆರುತ್ತಾ?

Shivamogga Feb 13, 2024 |  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾ ಧಿಕಾರಿ ಹುದ್ದೆಯ ನೇಮಕದ ವೇಳೆ ಬಿಎಸ್ಸಿ ಅರಣ್ಯ ಶಾಸ್ತ್ರ ಓದಿದವರನ್ನ ಕಡೆಗಣಿಸಲಾಗುತ್ತಿದೆ ಎಂದು ಅರಣ್ಯ ಶಾಸ್ತ್ರ ಓದಿ ಬಿಎಸ್​ಸಿ ಪದವಿ ಪಡೆದ ವಿದ್ಯಾರ್ಥಿಗಳು. ನಿನ್ನೆ ಇದೇ ಕಾರಣಕ್ಕೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ಸಹ ನಡೆಸಿದ್ದಾರೆ. 

ಶಿವಮೊಗ್ಗದ  ಸೈನ್ಸ್ ಮೈದಾನದಿಂದ ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಡಿಸಿ ಕಚೇರಿ ಆವರಣಕ್ಕೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ವೃತ್ತಿಪರ ಅರಣ್ಯ ಶಾಸ್ತ್ರ ಪದವೀಧರರ ಸಾಮರ್ಥ ಮತ್ತು ಅಗತ್ಯವನ್ನು ಅರಿತ 2003 ರಲ್ಲಿ ಎಸಿಎಫ್​  ಮತ್ತು ಆರ್‌ ಎಫ್‌ಒ ಹುದ್ದೆಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಿತ್ತು. 2012ರಲ್ಲಿ ಆ‌ರ್.ಎಫ್‌ಒ ಹುದ್ದೆಗೆ ಶೇ.75ರಷ್ಟು ಮೀಸಲು ಹೆಚ್ಚಿಸಿತು. ಆದರೆ 2018ರಲ್ಲಿ ಪ್ರಸ್ತಾಪಿಸಲಾದ ಹೊಸ ಕರಡು ನಿಯಮದಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರ ಪದವೀಧರರಿಗೆ ಆರ್‌ಎಫ್‌ಒ ಹುದ್ದೆಯ ನೇಮಕ ದಲ್ಲಿ ಶೇ.75ರಷ್ಟಿದ್ದ ಮೀಸಲನ್ನು ಶೇ.50ಕ್ಕೆ ಕಡಿತಗೊಳಿಸಿದೆ. ಕೃಷಿ ತೋಟಗಾರಿಕೆ, ಮೀನುಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಹುದ್ದೆಯ ನೇಮಕದ ವೇಳೆ ಆಯಾ ಕ್ಷೇತ್ರದಲ್ಲಿ ಪರಿಣಿತಿ ಪಡೆದವರಿಗಷ್ಟೇ ಅವಕಾಶ ಇದೆ.

ಆದರೆ ಅರಣ್ಯ ಇಲಾಖೆಯಲ್ಲಿ ಅರಣ್ಯಶಾಸ್ತ್ರ ಓದಿದ ಪದವೀಧರರ ಹಿತ ಕಡೆಗಣಿಸಿ ಇತರರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ. ಅಲ್ಲದೆ ಸರ್ಕಾರದ ಕ್ರಮದಿಂದ  1200ಕ್ಕೂ ಹೆಚ್ಚು ಅರಣ್ಯಶಾಸ್ತ್ರ ಪದವೀಧರರಿಗೆ ಅನ್ಯಾಯವಾಗಲಿದೆ ಎಂದು ದೂರಿದ್ದಾರೆ.  

ಭಾರತೀಯ ಅರಣ್ಯ ನೀತಿ 1988: ಭಾರತೀಯ ಅರಣ್ಯ ಸೇವೆ ಹಾಗೂ ರಾಜ್ಯ ಅರಣ್ಯ ಸೇವೆಗಳಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವಿಯನ್ನು ಪಡೆದಿರಬೇಕೆಂದು ಉಲ್ಲೇಖಿಸಲಾಗಿದೆ.

ಕಾಮನ್‌ವೆಲ್ತ್ ವರದಿಯಲ್ಲಿಯೂ ಕೂಡಾ ಪರಿಸರ ನಾಶ ತಡೆಯಲು ಪರಿಹಾರ ಕ್ರಮವಾಗಿ ವೃತ್ತಿಪರ ಅರಣ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ಉಲ್ಲೇಖಿಸಲಾಗಿದೆ.

ರಿಯೋ ಅರ್ಥ ಸಮ್ಮಿಟ್ 1992 ರಲ್ಲಿಯೂ ಕೂಡಾ, ವೈಜ್ಞಾನಿಕವಾಗಿ ಅರಣ್ಯ ಸಂರಕ್ಷಿಸಲು ತಾಂತ್ರಿಕ ಅರಣ್ಯ ಶಿಕ್ಷಣದ ಮಹತ್ವವನ್ನು ಪುನರುಚ್ಚರಿಸಿದೆ

ಅರಣ್ಯಶಾಸ್ತ್ರ ಪದವಿ ಸೇರುವವರು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಕರ್ನಾಟಕ ಪರೀಕ್ಷಾ ಪ್ರಾಧೀಕಾರ ನಡೆಸುವ ಸಿ.ಇ.ಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, ಬಂದಿರುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳು ಬಿ.ಎಸ್ಸಿ(ಅರಣ್ಯಶಾಸ್ತ್ರ) ಪದವಿಯನ್ನೇ ಬೇರೆ ವಿಷಯಗಳಿಗಿಂತ ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುತ್ತಿರುವುದು, ಪ್ರತಿಭಾವಂತ ವಿದ್ಯಾರ್ಥಿಗಳೇ ಈ ಕ್ಷೇತ್ರಕ್ಕೆ ಬರುತ್ತಿರುವುದು ಈ ಪದವಿ ವ್ಯಾಸಂಗದ ಮಹತ್ವವನ್ನು ಸೂಚಿಸುತ್ತದೆ. 

ವಲಯ ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿ ಯಲ್ಲಿ ಸದರಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ಮೊದಲು ನೀಡಿದ್ದ ಶೇ.೭೫ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಶೇ.೫೦ಕ್ಕೆ ಇಳಿಸಲಾಗಿದೆ.

ಈ ರೀತಿ ಸರ್ಕಾರ ಅರಣ್ಯ ಇಲಾಖೆಯಲ್ಲಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರ ನೇಮಕಾತಿಗೆ ಮೀಸಲಾತಿಯನ್ನು ಕಡಿಮೆ ಮಾಡಿರುವುದು ಅನ್ಯಾಯದ ಸಂಗತಿ. ಅರಣ್ಯ ಇಲಾಖೆಯ ಗ್ರೂಪ್ ‘ಎ’, ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ವೃಂದದ ಹುದ್ದೆಗಳಿಗೆ ಬಿ.ಎಸ್ಸಿ (ಅರಣ್ಯಶಾಸ್ತ್ರ)ವನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಿ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. 

ಉಪ ವಲಯ ಅರಣ್ಯ ಅಧಿಕಾರಿಗಳ (DyRFO) ಹುದ್ದೆಗೆ ಸದ್ಯ ಇರುವ ಶೇ.೫೦ರಷ್ಟು ಮುಂಬಡ್ತಿ ಮತ್ತು

ಶೇ.೫೦ರಷ್ಟು ನೇರ ನೇಮಕಾತಿಯನ್ನು ತೆಗೆದು ಎಲ್ಲಾ ಶೇ.೧೦೦ರಷ್ಟು ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಲು ವೃಂದ ಮತ್ತು ನೇಮಕಾತಿ (C&R) ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ.

ಈ ರೀತಿಯ ಶಿಫಾರಸ್ಸಿನಿಂದ ಅರಣ್ಯ ರಕ್ಷಕರು ಮತ್ತು ವೀಕ್ಷಕರಿಗೆ ಮುಂಬಡ್ತಿ ಅವಕಾಶಗಳನ್ನು ಹೆಚ್ಚಿಸಿ ಅವರನ್ನು ಉತ್ತಮವಾಗಿ ಪ್ರೇರೇಪಿಸಲು ಸಾಧ್ಯವೆಂಬ ಅಭಿಪ್ರಾಯ ನೀಡಲಾಗಿದೆ. ಈಶಿಫಾರಸ್ಸು ಅವೈಜ್ಞಾನಿಕವಾಗಿದ್ದು ಮತ್ತು ಸರ್ಕಾರವೇ ಈ ಹಿಂದೆ ಉಪ ವಲಯ ಅರಣ್ಯ ಅಧಿಕಾರಿಗಳ (DyRFO) ಹುದ್ದೆಯನ್ನು ಸೃಜಿಸುವಾಗ ತಂದ ಬದ್ಧತೆಗೆ ವಿರುದ್ಧವಾಗಿದೆ  ಎಂಬುದು ವಿದ್ಯಾರ್ಥಿಗಳ ಆರೋಪ.ಅದಕ್ಕೆ ಪೂರಕವಾಗಿ ಕೆಲವೊಂದು ಅಂಶಗಳನ್ನು ವಿದ್ಯಾರ್ಥಿಗಳು ನೀಡಿದ್ದಾರೆ. 

ವಿದ್ಯಾರ್ಥಿಗಳು ಗಮನಸೆಳೆದ ಅಂಶಗಳು

ವರದಿಯಲ್ಲಿಯೇ ಹೇಳಿರುವಂತೆ ಪೊಲೀಸ್ ಇಲಾಖೆಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳ ನೇರ ನೇಮಕಾತಿಯನ್ನು ಕಾನ್ನೇಬಲ್ ಹಾಗೂ ಪಿ.ಎಸ್.ಐ ಮಟ್ಟದಲ್ಲಿ ಮಾತ್ರ ಮಾಡಲಾಗುತ್ತಿದೆ. ಇದರ ಅನ್ವಯ ಕೂಡ ಪಿ.ಎಸ್.ಐ ಹುದ್ದೆಗೆ ಸಮನಾದ ಗ್ರೂಪ್ ‘ಸಿ’ ಮಟ್ಟದ ಅರಣ್ಯ ಇಲಾಖೆಯ ಹುದ್ದೆಯಾದ ಉಪ ವಲಯ ಅರಣ್ಯ ಅಧಿಕಾರಿಗಳ (DyRFO) ಹುದ್ದೆಗೆ ನೇರ ನೇಮಕಾತಿಯನ್ನು ಉಳಿಸಿಕೊಳ್ಳುವುದು ಸೂಕ್ತ.

ಉಪ ವಲಯ ಅರಣ್ಯ ಅಧಿಕಾರಿಗಳ (DyRFO) ನೇರ ನೇಮಕಾತಿಯಿಂದ ಅರಣ್ಯ ವೀಕ್ಷಕರಿಗೆ, ಅರಣ್ಯ ರಕ್ಷಕರಿಗೆ ಮುಂಬಡ್ತಿ ಅವಕಾಶವನ್ನು ವಂಚಿತ ಗೊಳಿಸುತ್ತದೆ ಎಂಬ ಕಾರಣಕ್ಕೂ ಸಹ ಯಾವುದೇ ಆಧಾರವಿಲ್ಲ. ಏಕೆಂದರೆ ಘನ ಸರ್ಕಾರದ ಮೂಲ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಪಟ್ಟಿ ೧ ರಲ್ಲಿ ಸೂಚಿಸಿರುವ ಇಲಾಖೆಗಳಲ್ಲಿ ಶೇ.೫೦ರಷ್ಟು ಮುಂಬಡ್ತಿ ಅವಕಾಶ ಈಗಾಗಲೇ ಇದೆ. ಹೀಗಾಗಿ ಹಾಲಿ ಇರುವ ಶೇ.೫೦ರ ಮುಂಬಡ್ತಿ ಮತ್ತು ಶೇ.೫೦ರ ನೇರ ನೇಮಕಾತಿಯನ್ನು ಮುಂದುವರಿಸುವುದು ಸೂಕ್ತ

ಇತರೆ ಇಲಾಖೆಗಳಲ್ಲೂ ಕೂಡ ಅಂದರೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಇವುಗಳಲ್ಲಿ ಹುದ್ದೆಗಳಿಗೆ ಶೇ.50ರಷ್ಟು ನೇಮಕಾತಿಯನ್ನು ನೇರವಾಗಿ ಮಾಡಲಾಗುತ್ತಿದ್ದು, ಈಗ ಅರಣ್ಯ ಇಲಾಖೆಯಲ್ಲಿ ಮಾತ್ರವೇ ನೂರರ ಮುಂಬಡ್ತಿಯನ್ನು ಮಾಡಲು ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕ. ಮುಂದುವರೆದು ಇದು ಅರಣ್ಯ ಸಂರಕ್ಷಣೆಗೆ ಬೇಕಾಗುವ ನುರಿತ ಮಾನವ ಸಂಪನ್ಮೂಲಗಳ ಸೇವೆಯನ್ನು ಪಡೆಯುವುದರಿಂದ ಇಲಾಖೆ ವಂಚಿತವಾಗುತ್ತದೆ

ಉಪ ವಲಯ ಅರಣ್ಯ ಅಧಿಕಾರಿಗಳ (DyRFO) ಹುದ್ದೆಗಳನ್ನು ನಿರ್ವಹಿಸುವಾಗ ಬೇಕಾದ ಅರಣ್ಯ ವಿಜ್ಞಾನದ ಬಗೆಗಿನ ಜ್ಞಾನ ಮತ್ತು ಕ್ಷೇತ್ರ ಕೌಶಲ್ಯಗಳನ್ನು ಗಮನಿಸಿ ಈ ಹಿಂದೆ ಉಪ ವಲಯ ಅರಣ್ಯ ಅಧಿಕಾರಿಗಳ (DyRFO) ಹುದ್ದೆಗಳಿಗೆ ಅರಣ್ಯ ವಿಜ್ಞಾನ ಪದವಿ ಹೊಂದಿರುವವರಿಗೆ ಶೇ.೫೦ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ ಪ್ರಸ್ತುತ ಶ್ರೀ ವಿಜಯ ಭಾಸ್ಕರ್ ವರದಿಯ ಕ್ರಮ ಸಂಖ್ಯೆ ೮೧ ಅದಕ್ಕೆ ವ್ಯತಿರಿಕ್ತವಾಗಿದ್ದು, ಈ ಅಂಶ ಅತ್ಯಂತ ಪ್ರಮುಖವಾಗಿದೆ.

ನೇರ ನೇಮಕಾತಿಯಿಂದ ಉಂಟಾಗಬಹುದಾದ ಜೇಷ್ಠತೆಯ ಬಗೆಗಿನ ವ್ಯಾಜ್ಯಗಳು ಕೇವಲ ಅರಣ್ಯ ರಕ್ಷಕರ ಮತ್ತು ನೇರ ನೇಮಕಾತಿ ಹೊಂದಿದ DyRFO ಗಳ ನಡುವೆ ಮಾತ್ರವೇ ಇಲ್ಲ. ಎಲ್ಲಾ ಮಟ್ಟದ ಹುದ್ದೆಗಳಲ್ಲೂ ಸಹ ಈ ರೀತಿಯ ವ್ಯಾಜ್ಯಗಳು ಇವೆ. ಹಾಗಾಗಿ DyRFO ಮಟ್ಟದ ನೇರ ನೇಮಕಾತಿಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಮಾಡಿರುವ ಶಿಫಾರಸ್ಸು ಅವೈಜ್ಞಾನಿಕವೆನಿಸುತ್ತದೆ. ಜೇಷ್ಠತಾ ಸಮಸ್ಯೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ನಿವಾರಿಸಿ DyRFO ಹುದ್ದೆಗಳಿಗೆ ಹಾಲಿ ಇರುವ ಮುಂಬಡ್ತಿ ಮತ್ತು ನೇರ ನೇಮಕಾತಿಯನ್ನು ಮುಂದುವರೆಸಬೇಕೆಂದು ಈ ಮೂಲಕ ಗೌರವಪೂರ್ವಕವಾಗಿ ಮನವಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ವಿನಂತಿಸಿದ್ದಾರೆ. 

Deputy Commissioner’s office in Shivamogga,BSc in Forestry,  recruitment of the forest department

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು