ಮಲೆನಾಡು ಟುಡೆ ಸುದ್ದಿ / ಸಾಗರ / ಶಿವಮೊಗ್ಗ ಜಿಲ್ಲೆಯ ಸಾಗರ (Sagar) ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ತನ್ನ ಮನೆಯ ಸಾಕು ನಾಯಿಗಳೊಂದಿಗೆ ಕಚ್ಚಾಡಿತು ಎಂಬ ಕಾರಣಕ್ಕೆ ಬೀದಿ ನಾಯಿಯೊಂದರ ಮೇಲೆ ಅಕ್ರಮ ಬಂದೂಕಿನಿಂದ ಗುಂಡು ಹಾರಿಸಿ ಕೊಂದ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗಮೂರ್ತಿ ಎಂಬಾತನ ವಿರುದ್ಧ ಆನಂದಪುರ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ನಾಡವಳ್ಳಿ ಗ್ರಾಮದ ಬೋರೆಪ್ಪ ಎಂಬುವವರು ದನ ಮೇಯಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಹಿಂದೆಯೇ ಕಂದು ಬಣ್ಣದ ಗಂಡು ನಾಯಿಯೊಂದು ಬರುತ್ತಿತ್ತು. ಮಾರ್ಗಮಧ್ಯೆ ಲಿಂಗಮೂರ್ತಿ ಎಂಬುವವರ ಮನೆಯ ಸಮೀಪ ಬಂದಾಗ, ಆ ನಾಯಿ ಲಿಂಗಮೂರ್ತಿಯ ಸಾಕು ನಾಯಿಗಳೊಂದಿಗೆ ಕಚ್ಚಾಡಿದೆ. ಈ ಘಟನೆಯಿಂದ ಆಕ್ರೋಶಗೊಂಡ ಲಿಂಗಮೂರ್ತಿ, ತನ್ನ ಬಳಿ ಇದ್ದ ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗುಂಡೇಟು ತಗುಲಿದ ನಾಯಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದೆ.
ಪರವಾನಗಿ ಇಲ್ಲದ ಬಂದೂಕು ಬಳಸಿ ಪ್ರಾಣಿಯನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆನಂದಪುರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆನಂದಪುರ ಪಿಎಸ್ಐ ಪ್ರವೀಣ್ ಅವರು ಲಿಂಗಮೂರ್ತಿ ವಿರುದ್ಧ ಬಿಎನ್ಎಸ್ ಹಾಗೂ ಆರ್ಮ್ಸ್ ಆಕ್ಟ್ನ ಸಂಬಂಧಿತ ಅಂಶಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
