ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ ನಾಳೆ ಬೆಳಿಗ್ಗೆಯಿಂದ ಹೊಸನಗರ ತಾಲೂಕಿನಿಂದ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶ್ಚಿಮ ಘಟ್ಟಗಳ ರೈತ ಸಹಕಾರಿ ವೇದಿಕೆಯ ಅಧ್ಯಕ್ಷರಾದ ಆರ್.ಎಂ. ಮಂಜುನಾಥ್ ಗೌಡ ಅವರು ತಿಳಿಸಿದ್ದಾರೆ
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 9:00 ಗಂಟೆಗೆ ಕಾರಗಡಿಯ ಸಿದ್ಧಿವಿನಾಯಕ ದೇವಸ್ಥಾನದಿಂದ ಈ ಪಾದಯಾತ್ರೆ ಆರಂಭವಾಗಲಿದೆ. ಈ ಪ್ರತಿಭಟನೆಯಲ್ಲಿ ಸುಮಾರು 5,000ಕ್ಕೂ ಹೆಚ್ಚು ರೈತರು ಹಾಗೂ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.ಪಾದಯಾತ್ರೆಯು ಹೊಸನಗರದ ಬಸ್ ನಿಲ್ದಾಣದ ಬಳಿ ತಲುಪಿದ ನಂತರ ಅಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆ ನಡೆಯಲಿದೆ. ತದನಂತರ ವಿಭಾಗೀಯ ಅಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ರೈತರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಲು ಸೇವ್ ಫಾರ್ಮರ್ಸ್ ಎಂಬ ವೆಬ್‌ಸೈಟ್ ಒಂದನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಅದರ ಮೂಲಕ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ನೇರವಾಗಿ ಮನವಿ ಮತ್ತು ಆಕ್ಷೇಪಣೆಗಳನ್ನು ತಲುಪಿಸಲಾಗುತ್ತದೆ. ಈಗಾಗಲೇ ವೆಬ್ಸ್ಸೈಟ್ ಮೂಲಕ 250 ಕ್ಕೂ ಹೆಚ್ಚುಜನ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದರು.
ಹಾಗೆಯೇ ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಜನರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿ, ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಲ್ಲದೆ, ವಿಶೇಷ ಅಧಿವೇಶನ ಕರೆಯುವುದಾಗಿ ಘೋಷಿಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕೇಂದ್ರ ಸರ್ಕಾರವು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 25 ರವರೆಗೆ ನೀಡಿದ್ದ ಕಾಲಾವಕಾಶವನ್ನು ಮತ್ತಷ್ಟು ವಿಸ್ತರಿಸಬೇಕು . ಮುಂಬರುವ ದಿನಗಳಲ್ಲಿ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇವೆ, ಅವರು ನಾವು ಶಿವಮೊಗ್ಗದಲ್ಲಿ ನಡೆಸುವ ಸಮಾವೇಶಕ್ಕೆ ಸ್ವತಃ ಭೇಟಿ ನೀಡಿ ನಮ್ಮ ಮನವಿ ಸ್ವೀಕರಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನಾ ಅಭಿಯಾನವು ಸೆಪ್ಟೆಂಬರ್ 3 ರಂದು ಸಾಗರದಲ್ಲಿ, ಸೆಪ್ಟೆಂಬರ್ 7 ರಂದು ತೀರ್ಥಹಳ್ಳಿಯಲ್ಲಿ ಹಾಗೂ ಅಂತಿಮವಾಗಿ ಶಿವಮೊಗ್ಗ ನಗರದಲ್ಲಿ ಬೃಹತ್ ಮಟ್ಟದಲ್ಲಿ ಮುಂದುವರಿಯಲಿದೆ ಎಂದರು.
ಇನ್ನೂ ಸಂಚಾಲಕರಾದ ಬಿ ಆರ್ ಜಯಂತ್ ಮಾತನಾಡಿ ನಾವೇನು ಪರಿಸರ ವಿರೋಧಿಗಳಲ್ಲ ಪರಿಸರ ಪ್ರೇಮಿಗಳು ನಮಗೂ ಸಹ ಗಿಡ ಮರ ಪ್ರಾಣಿ ಪಕ್ಷಗಳ ಮೇಲೆ ಒಲವಿದೆ. ಕಸ್ತೂರಿರಂಗನ್ ವರದಿಯನ್ನು ಕೇರಳದಲ್ಲಿ ಮಾರ್ಪಾಡು ಮಾಡಿದ ರೀತಿಯಲ್ಲಿ ಕರ್ನಾಟಕದಲ್ಲಿ ಮಾರ್ಪಾಡು ಮಾಡಬೇಕು, ಹಾಗೆಯೇ ರೈತರ ಕೃಷಿ ಚಟುವಟಿಗೆಗಳಿಗೆ ಯಾವುದೇ ತೊಂದರೆಯನ್ನು ನೀಡಬಾರದು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
