ಮಲೆನಾಡು ಟುಡೆ ಸುದ್ದಿ / ಶಂಕರಘಟ್ಟ / ಸಾಗರ ತಾಲೂಕಿನ ಉಳ್ಳೂರಿನಲ್ಲಿರುವ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ (Sagara Gangothri College) 2023-24ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಮಾನ್ಯತೆ ರದ್ದಾಗಿದ್ದು, ಮುಂಬರುವ ಶೈಕ್ಷಣಿಕ ಸಾಲಿನ ಬಿ.ಇಡಿ. ಕೋರ್ಸ್‌ಗೆ ಪ್ರವೇಶ ಪಡೆಯುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟ ವಿಷಯ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ ತಿಳಿಸಿದ್ದಾರೆ.
ಈ ಕುರಿತಾಗಿ ಮಲೆನಾಡು ಟುಡೆಗೆ ಲಭ್ಯವಾದ ಕುವೆಂಪು ವಿವಿಯ ಅಧಿಕೃತ ಪ್ರಕಟಣೆಯ ವಿವರ ಹೀಗಿದೆ. ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯವು ಸಕಾಲದಲ್ಲಿ ಅರ್ಜಿ ಸಲ್ಲಿಸದೆ ಇರುವ ಕಾರಣ 2023-24ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆ ಪಡೆದಿರುವುದಿಲ್ಲ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ ತಿಳಿಸಿದ್ದಾರೆ.
2024-24ನೇ ಸಾಲಿನಲ್ಲಿ ಎನ್‌ಸಿಟಿಇ ಮಾನ್ಯತೆ ಇಲ್ಲದ ಕಾರಣ ಕಾಲೇಜಿಗೆ ವಿಶ್ವವಿದ್ಯಾಲಯದ ಸಂಯೋಜನೆ ದೊರೆತಿಲ್ಲ. 2025-26 ಮತ್ತು 206-27ನೇ ಸಾಲಿನಲ್ಲಿ ಯುಯುಸಿಎಂಎಸ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ, ಸ್ಥಳೀಯ ತಪಾಸಣಾ ಸಮಿತಿಯ ಮುಖಾಂತರ ನಿಯಮಾನುಸಾರ ಸಂಯೋಜನಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ವಿಶ್ವವಿದ್ಯಾಲಯದಿಂದ ಸಂಯೋಜನಾ ಆದೇಶವನ್ನೂ ಪಡೆದಿಲ್ಲ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ನಡುವೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು 2026ರ ಜೂನ್ 24ರಂದು WP.8665/2025 ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಆದೇಶದ ಅನ್ವಯ ಕಾಲೇಜಿಗೆ ಪರೀಕ್ಷೆ ಮತ್ತು ಪ್ರವೇಶಾತಿಗೆ ಅನುಮತಿ ದೊರೆತಿದೆ. ಆದರೆ ಈ ಅನುಮತಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
ಒಂದು ವೇಳೆ ನ್ಯಾಯಾಲಯದ ಅಂತಿಮ ತೀರ್ಪಿನಲ್ಲಿ ಮಧ್ಯಂತರ ಆದೇಶ ರದ್ದಾದಲ್ಲಿ ಸಂಸ್ಥೆಯಾಗಲೀ, ವಿದ್ಯಾರ್ಥಿಗಳಾಗಲೀ ಸಮತೆಯ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯ ಮಾನ್ಯತೆಯನ್ನೇ ಕಳೆದುಕೊಳ್ಳುವ ಭೀತಿ ಎದುರಾಗಬಹುದು ಎಂದು ಎಚ್ಚರಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ. ಕೋರ್ಸ್‌ಗೆ ಪ್ರವೇಶ ಪಡೆಯುವ ವಿಚಾರವನ್ನು ವಿದ್ಯಾರ್ಥಿಗಳು ತಮ್ಮ ವಿವೇಚನೆಯ ಆಧಾರದಲ್ಲಿ ನಿರ್ಧರಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ ತಿಳಿಸಿದ್ದಾರೆ.
