ವಿದ್ಯುತ್ ಉತ್ಪಾದನೆಗೆ ಶಾಕ್? | ಬರಿದಾಗುತ್ತಾ ಲಿಂಗನಮಕ್ಕಿ ಡ್ಯಾಂ | ಇಲ್ಲಿದೆ ರಿಪೋರ್ಟ್

KARNATAKA NEWS/ ONLINE / Malenadu today/ Oct 16, 2023 SHIVAMOGGA NEWS

ವಿದ್ಯುತ್ ಕೊರತೆಯಿಂದ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಯಾಗಿರುವ ಈ ಹೊತ್ತಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಲಿಂಗಮನಕ್ಕಿ ಜಲಾಶಯದ ನೀರು ಇನ್ನು 150 ದಿನಕ್ಕೆ ಸಾಕಾಗುವಷ್ಟು ಇದ್ದು ಬೇಸಿಗೆ ಹೊತ್ತಿಗೆ ಜಲಾಶಯ ಡೆಡ್ ಸ್ಟೋರೇಜ್ ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಶರಾವತಿ ಕೊಳ್ಳದ ಐದು ಜಲ ವಿದ್ಯುದಾಗಾರಗಳಿಂದ ರಾಜ್ಯದ ಬೇಡಿಕೆಯ ಶೇ.25ರಷ್ಟು ವಿದ್ಯುತ್ ಅನ್ನು ಪೂರೈಸಬಹುದು. ಉಷ್ಣ ವಿದ್ಯುತ್ ಸ್ಥಾವರಗಳು ಕೈಕೊಟ್ಟಾಗಲೆಲ್ಲ ಜಲ ವಿದ್ಯುತ್ ಘಟಕಗಳಿಗೆ ಹೆಚ್ಚಿನ ಲೋಡ್ ನೀಡಲಾಗಿದೆ. 

ಎಂತಹ ಕಠಿಣ ಸಂದರ್ಭಗಳಲ್ಲಿಯೂ ಬೇಡಿಕೆ ತಕ್ಕಷ್ಟು ವಿದ್ಯುತ್ ಪೂರೈಸಿದ ಹೆಗ್ಗಳಿಕೆ ಶರಾವತಿ ಕೊಳ್ಳದ ನಾಲ್ಕು ವಿದ್ಯುದಾಗಾರಗಳಿಗೆ ಇದೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯ ಶೇ.50ರಷ್ಟು ಮಾತ್ರ ಭರ್ತಿಯಾಗಿದೆ. 

ಮಾನ್ಸೂನ್ ಅವಧಿ ಮುಕ್ತಾಯಗೊಂಡಿರುವುದರಿಂದ ಜಲಾಶಯಕ್ಕೆ ನೀರು ಬರುವುದೇ ಅನುಮಾನ. ಈಗ ಪ್ರತಿದಿನ 2 ರಿಂದ 3 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದ್ದು ಕೆಲವೇ ದಿನಗಳಲ್ಲಿ ಒಳಹರಿವು ಬತ್ತಿಹೋಗಲಿದೆ.

ಕಳೆದ 10 ವರ್ಷಗಳಲ್ಲಿ 2013-14, 2014-15, 2019-20ನೇ ಸಾಲಿನಲ್ಲಿ ಜಲಾಶಯ ತುಂಬಿದ್ದು ಬಿಟ್ಟರೆ 2022ರಲ್ಲಿ, 2021ರಲ್ಲಿ 1810 ಅಡಿ ದಾಟಿತ್ತು. ಉಳಿದಂತೆ ಶೇ.50ರಷ್ಟು ಭರ್ತಿಯಾಗಿದೆ. ಈ ವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲೇ ದಟ್ಟ ಮಲೆನಾಡಿನಲ್ಲೂ ಬಿಸಿಲು ಆವರಿಸಿ ಜಲಾಶಯಕ್ಕೆ ಒಳಹರಿವು ನಿಂತೇ ಹೋಗಿತ್ತು. 

ಇದೇ ಸಮಯದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸಹ ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಲೋಡ್ ಕೊಡಲಾಗಿತ್ತು. ಇದರಿಂದ ನೀರಿನ ಸಂಗ್ರಹ ಪ್ರಮಾಣ ಗಣನೀಯ ಏರಿಕೆಯಾಗಲಿಲ್ಲ. ಈ ವರ್ಷದ ಗರಿಷ್ಠ ಮಟ್ಟ 1790.70 (ಜಲಾಶಯದ ಪೂರ್ಣ ಮಟ್ಟ 1819 ಅಡಿ). 152 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 68.20 ಟಿಎಂಸಿ ಮಾತ್ರ ನೀರಿದೆ.

ಶರಾವತಿ ಕೊಳ್ಳದ ಎಲ್‌ಪಿಎಚ್, ಎಸ್‌ಜಿಎಸ್, ಬಿಜಿಎಸ್, ಜಿಪಿಎಚ್, ಎಂಜಿಎಚ್‌ಇ ವಿದ್ಯುದಾಗಾರಗಳಿಂದ 2018-19ರಲ್ಲಿ 5800 ಮಿಲಿಯನ್ ಯುನಿಟ್, 2019-20ರಲ್ಲಿ 6358 ಮಿ.ಯು, 2020-21ರಲ್ಲಿ 5735 ಮಿ.ಯು, 2021-22ರಲ್ಲಿ 6453 ಮಿ.ಯು, 2022-23ರಲ್ಲಿ 6677 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. 

ಈಗ ಲಭ್ಯವಿರುವ ನೀರಿನ ಆಧಾರದ ಮೇಲೆ 150 ದಿನಗಳವರೆಗೆ ಗರಿಷ್ಠ 2098 ಮಿಲಿಯನ್ ಯುನಿಟ್ ಮಾತ್ರ ವಿದ್ಯುತ್ ಮಾತ್ರ ಉತ್ಪಾದನೆ ಮಾಡಬಹುದು. ಒಂದು ವೇಳೆ ಹೆಚ್ಚಿನ ಲೋಡ್ ಬಿದ್ದರೆ 150ದಿನಕ್ಕಿಂತ ಮೊದಲೇ ಜಲಾಶಯ ಖಾಲಿಯಾಗಬಹುದು.

ಲಿಂಗನಮಕ್ಕಿ ಜಲಾಶಯದ ಮಟ್ಟ ಕುಸಿಯುತ್ತಿದ್ದಂತೆ ದ್ವೀಪದ ಜನರಿಗೆ, ಸಿಗಂದೂರು ದೇವಸ್ಥಾನಕ್ಕೆ ಹೋಗುವ ಭಕ್ತಾಧಿಗಳಿಗೆ ಇರುವ ಲಾಂಚ್‌ಗಳು ಸೇವೆ ನಿಲ್ಲಿಸಲಿವೆ. ಈ ವರ್ಷ ಜೂನ್ ತಿಂಗಳಲ್ಲಿ ಕೆಲ ದಿನಗಳ ಕಾಲ ಲಾಂಚ್ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹಿನ್ನೀರಿನ ಸಾವಿರಾರು ಜನರು ಬದುಕಿಗೆ ತೊಂದರೆಯಾಗಿತ್ತು. ಲಿಂಗನಮಕ್ಕಿ ಮೇಲೆ ಹೆಚ್ಚಿನ ಒತ್ತಡ ಹಾಕದೆ ಲಭ್ಯವಿರುವ ನೀರನ್ನು ಮುಂದಿನ ಮಳೆಗಾಲದ ಅವಧಿಯವರೆಗೂ ಬಳಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ.

ಸಂಜೆ ವೇಳೆಗೆ ನಮಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬೇಡಿಕೆ ಬಂದಷ್ಟು ನಾವು ಉತ್ಪಾದನೆ ಮಾಡಬೇಕಾಗುತ್ತದೆ. ಇಲ್ಲ ಎನ್ನಲೂ ಬರುವುದಿಲ್ಲ. ಈಗಿರುವ ನೀರನ್ನು ಅಂದಾಜು 150 ದಿನ ಬಳಸಬಹುದು. ಹೆಚ್ಚು ಬಳಸಿದರೆ ಬೇಗ ಖಾಲಿ ಆಗಬಹುದು ಎನ್ನುತ್ತಾರೆ ಕೆಪಿಸಿಯ ಮುಖ್ಯ ಎಂಜಿನಿಯರ್  ಉದಯ್ ನಾಯ್ಕ್, 


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Leave a Comment