Karnataka Police ಬೆಂಗಳೂರು: ಕರ್ನಾಟಕಪೊಲೀಸ್ ಇಲಾಖೆಯಲ್ಲಿ ದಶಕಗಳಿಂದ ಬೇರೂರಿದ್ದ ಬ್ರಿಟಿಷ್ ಕಾಲದ ಆರ್ಡರ್ಲಿ ಪದ್ಧತಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಮಂಗಳ ಹಾಡಿದೆ. ಕಠಿಣ ತರಬೇತಿ ಪಡೆದು ಜನಸೇವೆಗೆ ಸಜ್ಜಾದ ಪೊಲೀಸ್ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ಇನ್ನು ಮುಂದೆ ಸಂಪೂರ್ಣವಾಗಿ ನಿಷೇಧಿಸಿ ಹೊಸ ಆದೇಶ ಹೊರಡಿಸಲಾಗಿದೆ.
ಸಾಗರ: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ
ಫೆಬ್ರವರಿ ತಿಂಗಳಿನಿಂದ ಜಾರಿಗೆ ಬಂದಿರುವ ಈ ದ ನಿಯಮದ ಪ್ರಕಾರ, ಯಾವುದೇ ಕಾನ್‌ಸ್ಟೇಬಲ್ ಅಥವಾ ಹೆಡ್ ಕಾನ್‌ಸ್ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳ ಅಧೀನದಲ್ಲಿ ಮನೆಕೆಲಸಕ್ಕಾಗಿ ನಿಯೋಜಿಸುವಂತಿಲ್ಲ. ಅಪರಾಧ ತನಿಖೆ, ಕಾನೂನು ಸುವ್ಯವಸ್ಥೆ ಮತ್ತು ಶಸ್ತ್ರಾಸ್ತ್ರ ನಿರ್ವಹಣೆಯಂತಹ ಗಂಭೀರ ಜವಾಬ್ದಾರಿಗಳನ್ನು ಹೊರಬೇಕಾದ ಸಿಬ್ಬಂದಿಯನ್ನು ಇನ್ನು ಮುಂದೆ ಕೇವಲ ಮೂಲ ಪೊಲೀಸ್ ಕರ್ತವ್ಯಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ವಾಸ್ತವವಾಗಿ, 2016-17ರಲ್ಲಿಯೇ ಈ ಪದ್ಧತಿಯನ್ನು ರದ್ದುಗೊಳಿಸುವ ಪ್ರಯತ್ನ ನಡೆದಿತ್ತಾದರೂ, ಅದು ಪೂರ್ಣಪ್ರಮಾಣದಲ್ಲಿ ಜಾರಿಯಾಗಿರಲಿಲ್ಲ. ಹಿರಿಯ ಅಧಿಕಾರಿಗಳ ಸಮವಸ್ತ್ರ ಇಸ್ತ್ರಿ ಮಾಡುವುದು, ಅಡುಗೆ ಮಾಡುವುದು, ತೋಟಗಾರಿಕೆ ಹಾಗೂ ಮಕ್ಕಳನ್ನು ಶಾಲೆಗೆ ಬಿಡುವಂತಹ ಮನೆಗೆಲಸಗಳಿಗೆ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿತ್ತು. ಬ್ರಿಟಿಷ್ ಸೇನೆಯಲ್ಲಿ ಕುದುರೆಗಳನ್ನು ನೋಡಿಕೊಳ್ಳಲು ಬ್ಯಾಟ್-ಮ್ಯಾನ್ ಹೆಸರಿನಲ್ಲಿ ಆರಂಭವಾದ ಈ ಸಂಪ್ರದಾಯವು ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲಿ ದಾಸ್ಯದ ಸಂಕೇತವಾಗಿ ಮುಂದುವರಿದಿತ್ತು.
ಈ ಹೊಸ ವ್ಯವಸ್ಥೆಯಲ್ಲಿ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರು ಪರ್ಯಾಯ ಕ್ರಮಗಳನ್ನು ಸೂಚಿಸಿದ್ದಾರೆ. ಇನ್ನು ಮುಂದೆ ಅಧಿಕಾರಿಗಳಿಗೆ ಸಹಾಯಕರಾಗಿ ‘ಡಿ-ಗ್ರೂಪ್’ ನೌಕರರನ್ನು ಅಥವಾ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ಒಟ್ಟು 746 ಸಹಾಯಕರನ್ನು (373 ಫಾಲೋವರ್ಸ್ ಮತ್ತು 373 ಖಾಸಗಿ ವ್ಯಕ್ತಿಗಳು) ನಿಯೋಜಿಸಲಾಗುವುದು. ಈ ಸೇವೆಗಾಗಿ ನೇಮಕಗೊಳ್ಳುವ ಖಾಸಗಿ ವ್ಯಕ್ತಿಗಳ ಗೌರವಧನವನ್ನು ಸರ್ಕಾರ ಶೇ. 150 ಕ್ಕಿಂತ ಹೆಚ್ಚು ಹೆಚ್ಚಿಸಿರುವುದು ವಿಶೇಷ.
ಯಾವ ಅಧಿಕಾರಿಗಳಿಗೆ ಎಷ್ಟು ಸಹಾಯಕರನ್ನು ನೀಡಬೇಕು ಎಂಬುದನ್ನೂ ಆದೇಶದಲ್ಲಿ ವಿವರಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಗರಿಷ್ಠ 6 ಸಹಾಯಕರು ಸಿಗಲಿದ್ದಾರೆ. ಉಳಿದಂತೆ ಡಿಜಿಪಿ ಮತ್ತು ಎಡಿಜಿಪಿ ಶ್ರೇಣಿಯ ಅಧಿಕಾರಿಗಳಿಗೆ 3, ಐಜಿಪಿಗಳಿಗೆ 2 ಹಾಗೂ ಎಸ್‌ಪಿ ದರ್ಜೆಯ ಅಧಿಕಾರಿಗಳಿಗೆ ತಲಾ ಒಬ್ಬರು ಸಹಾಯಕರನ್ನು ಒದಗಿಸಲಾಗುತ್ತದೆ.
Karnataka Police Orderly System Abolished

