ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ಮಾರ್ಚ್ 2027 ರ ಒಳಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡಬೇಕು. ಇಲ್ಲದಿದ್ದರೆ ಆಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್‌ನ ಪ್ರಮುಖರಾದ ಕಲ್ಲೂರು ಮೇಘರಾಜ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಮಾಡುವುದಾಗಿ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಮಾರ್ಚ್ 08, 2026 ರಂದು ಘೋಷಣೆ ಮಾಡಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈವರೆಗೂ ಆ ಘೋಷಣೆಯನ್ನು ಅನುಷ್ಠಾನಗೊಳಿಸದಿರುವುದು ಖಂಡನೀಯ ಎಂದರು.
ಸರ್ಕಾರವು ಮಾರ್ಚ್ 14, 2027 ರ ಶನಿವಾರದೊಳಗೆ ಮರುನಾಮಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತಪ್ಪಿದಲ್ಲಿ, ಶಾಂತವೇರಿ ಗೋಪಾಲಗೌಡರ 104ನೇ ಜನ್ಮದಿನವಾದ ಮಾರ್ಚ್ 14, 2027 ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮುಂಭಾಗದಲ್ಲಿ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳ ಅಭಿಮಾನಿಗಳೊಂದಿಗೆ ಟ್ರಸ್ಟ್ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದರು.
ನಾಡು ಕಂಡ ಅಪ್ರತಿಮ ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರು 1951ರ ದಶಕದಲ್ಲಿ ನಡೆಸಿದ ಐತಿಹಾಸಿಕ ಕಾಗೋಡು ಸತ್ಯಾಗ್ರಹದಿಂದಾಗಿ ರಾಜ್ಯದ ಲಕ್ಷಾಂತರ ಗೇಣಿ ಕುಟುಂಬಗಳಿಗೆ ಭೂ ಒಡೆತನದ ಹಕ್ಕುಪತ್ರ ಸಿಗುವಂತಾಯಿತು. ಮೂರು ಬಾರಿ ಶಾಸಕರಾಗಿದ್ದರೂ ರಾಜ್ಯದ ಯಾವುದೇ ಭಾಗದಲ್ಲಿ ಒಂದು ಎಕರೆ ಜಮೀನು ಅಥವಾ ಒಂದು ನಿವೇಶನವನ್ನೂ ತಮ್ಮ ಹೆಸರಿಗೆ ಮಂಜೂರು ಮಾಡಿಸಿಕೊಳ್ಳದೆ ಜೀವನಪರ್ಯಂತ ಜನಸೇವೆಗೆ ಕಟಿಬದ್ಧರಾಗಿದ್ದರು. ರಾಮಮನೋಹರ ಲೋಹಿಯಾ ಅವರಂತಹ ಹಿರಿಯ ಸಮಾಜವಾದಿ ಮುಖಂಡರ ಸಿದ್ಧಾಂತದಂತೆ ಆದರ್ಶಮಯವಾಗಿ ಬದುಕಿದ ಅವರ ಗೌರವಾರ್ಥ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸ್ಪತ್ರೆಗೆ ಮರುನಾಮಕರಣ ಮಾಡುವ ಘೋಷಣೆ ಮಾಡಿದ್ದರು ಎಂದು ಕಲ್ಲೂರು ಮೇಘರಾಜ ಸ್ಮರಿಸಿದರು.
