Be a Soldier / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಣ್ಯ ಸಂಪತ್ತನ್ನು ಉಳಿಸುವುದು ಮತ್ತು ಬೆಳೆಸುವುದು ಇಂದಿನ ತುರ್ತಾಗಿದ್ದು, ದೇಶದ ಗಡಿಯನ್ನು ಕಾಯಲು ಸೈನಿಕರು ಎಷ್ಟು ಮುಖ್ಯವೋ, ದೇಶದ ಒಳಗಿರುವ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ “ಊರ ಒಳಗಿನ ಸೈನಿಕ”ನಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ಜಿ ಎ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿ.ಪಂ, ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಶಿವಮೊಗ್ಗ ಇವರ ಸಹಯೋಗದಲ್ಲಿ ಮಂಗಳವಾರ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅರಣ್ಯೀಕರಣ ಹಾಗೂ ಕೆರೆಗಳ ಪುನಶ್ಚೇತನ ಅಭಿಯಾನ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಅರಣ್ಯ ಸಂಪತ್ತನ್ನು ಉಳಿಸಲೇಬೇಕಿದೆ ಎಂದರು.
ಪ್ರಕೃತಿಯಲ್ಲಿ ಅರಣ್ಯ ಮತ್ತು ಜಲ ಸಂರಕ್ಷಣೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಶುದ್ಧವಾದ ಗಾಳಿ ಮತ್ತು ನೀರು ಸಿಗುವುದು ಕಷ್ಟಸಾಧ್ಯ. ಆದ್ದರಿಂದ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ” ದೇಶದ ಗಡಿ ರಕ್ಷಣೆಗಾಗಿ ನಾವು ಸೈನ್ಯವನ್ನು ನಿಯೋಜಿಸುತ್ತೇವೆ. ಆ ಗಡಿ ಭದ್ರತೆ ಎಷ್ಟು ಮುಖ್ಯವೋ, ದೇಶದ ಒಳಗಿನ ಅರಣ್ಯ ಪ್ರದೇಶಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.ಗಡಿಯಾಚೆಗಿನ ಆಕ್ರಮಣ ತಡೆಯಲು ಸೈನಿಕರಿದ್ದರೆ, ನಮ್ಮ ಒಳಗಿನ ಪರಿಸರವನ್ನು ರಕ್ಷಿಸಲು ನಾವೇ ಸೈನಿಕರಂತೆ ಕೆಲಸ ಮಾಡಬೇಕಾಗಿದೆ ಎಂದರು.
ನಮ್ಮ ನಗರ ಮತ್ತು ಪರಿಸರವನ್ನು ನಾವೇ ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಬಾಲ್ಯದಿಂದಲೇ ಅರಣ್ಯ ಬೆಳೆಸುವ ಮತ್ತು ಪರಿಸರ ಉಳಿಸುವ ಬಗ್ಗೆ ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ವಿಜ್ಞಾನದ ಪ್ರಕಾರ ಮನುಷ್ಯನಿಗೆ ಯೋಗ್ಯವಾದ ಗಾಳಿ ಮತ್ತು ನೀರು ಸಿಕ್ಕರೆ ಆತ 80 ರಿಂದ 90 ವರ್ಷಗಳ ಕಾಲ ಆರೋಗ್ಯವಾಗಿ ಬದುಕಬಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ಮಾಲಿನ್ಯದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾದ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ‘ಇದು ನನ್ನ ದೇಶ, ಇದು ನನ್ನ ಮರ, ಇದು ನನ್ನ ಕಾಡು, ನಮ್ಮ ನದಿಗಳು’ ಎಂಬ ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ದಾರಿ ಪ್ರತಿಯೊಬ್ಬ ಸಾರ್ವಜನಿಕರಲ್ಲೂ ಮೂಡಬೇಕಿದೆ. ಪರಿಸರ ಮತ್ತು ಜಲಮೂಲಗಳ ಪೋಷಣೆ ಹಾಗೂ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಬೃಹತ್ ಪರಿಸರ ಅಭಿಯಾನ:
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ರಾಜ್ಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ಐದು ವರ್ಷಗಳ ಕಾಲ ನಿರಂತರ ಪೋಷಣೆ
ಸಸಿಗಳನ್ನು ಕೇವಲ ನೆಟ್ಟು ಬಿಡುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ನೆಟ್ಟ ಸಸಿಗಳನ್ನು ಮುಂದಿನ 5 ವರ್ಷಗಳ ಕಾಲ ನಿರಂತರವಾಗಿ ಕಾಪಾಡಿ, ಪೋಷಿಸಿ ಮರಗಳನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ಪ್ರಾಧಿಕಾರ ಹೊತ್ತುಕೊಂಡಿದೆ. ಈ ಮಹತ್ಕಾರ್ಯದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಕೆ.ಟಿ. ಹನುಮಂತಪ್ಪ ಮಾತನಾಡಿ, ಕೆರೆಗಳು ಮತ್ತು ಹಸಿರೀಕರಣಕ್ಕೆ ಆದ್ಯತೆ ನೀಡಲೇಬೇಕಿದೆ. “ಕೆರೆಗಳು ಹಾಗೂ ಹಸಿರೀಕರಣ” ಎಂಬ ಶೀರ್ಷಿಕೆಯಡಿಯಲ್ಲಿ ಇಂದಿನ ಕಾರ್ಯಕ್ರಮ ನಡೆದಿದ್ದು, ಪ್ರಸ್ತುತ ದಿನಗಳಲ್ಲಿ ಇದು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಮಾನವನ ಬದುಕಿಗೆ ಮುಖ್ಯವಾಗಿ ಬೇಕಾಗಿರುವ ಅಂಶಗಳೆಂದರೆ ಶುದ್ಧವಾದ ನೀರು, ಮಾಲಿನ್ಯಮುಕ್ತ ಗಾಳಿ ಮತ್ತು ಉತ್ತಮ ಪರಿಸರ.
ತಾವು ದೆಹಲಿಯಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅಲ್ಲಿನ ಪರಿಸರ ಮಾಲಿನ್ಯಕ್ಕೆ ಹೋಲಿಸಿದರೆ ನಮ್ಮ ಭಾಗದ ಪರಿಸರ ಉತ್ತಮವಾಗಿದ್ದು ಇದನ್ನು ನಾವು ಹಸಿರಾಗಿಡುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.ಜಿಲ್ಲೆಯಲ್ಲಿ ಇಂತಹ ಸುಸ್ಥಿರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರ ಪ್ರಜ್ಞೆ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಸಾಕಷ್ಟು ಇಂತಹ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದ್ದು, ಪರಿಸರ ಸಂರಕ್ಷಣೆ ನಮ್ಮ ಹೊಣೆಗಾರಿಕೆ ಎಂದು ಯುವ ಪೀಳಿಗೆ ಅರಿತುಕೊಳ್ಳಬೇಕು. ಈ ಬದ್ದತೆ ಒಂದು ಗಿಡದಿಂದ ಆರಂಭವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ಅಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಡುವ ಮೂಲಕ ಹಸಿರು ಆಂದೋಲನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
