ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಬ್ಯಾಂಕಿಂಗ್ ಕ್ಷೇತ್ರದ ದೈನಂದಿನ ಒತ್ತಡದ ನಡುವೆಯೂ ಉದ್ಯೋಗಿಗಳಲ್ಲಿ ಕನ್ನಡಾಭಿಮಾನ ಬೆಳೆಸಲು, ನಾಡು-ನುಡಿಯ ಸೇವೆ ಮಾಡಲು ಹಾಗೂ ಬ್ಯಾಂಕ್ ನೌಕರರ ನಡುವೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ (ರಿ.), ಶಿವಮೊಗ್ಗ ವತಿಯಿಂದ ಇದೇ ನವೆಂಬರ್ 27 ಮತ್ತು 28 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಹಬ್ಬ 2026 ಅನ್ನು ಆಯೋಜಿಸಲಾಗಿದೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಅಧ್ಯಕ್ಷರಾದ ರಾಜೇಂದ್ರ ಪೈ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು. ವೃತ್ತಿಯಲ್ಲಿರುವವರು ಮತ್ತು ನಿವೃತ್ತರು ಎಂಬ ಯಾವುದೇ ಭೇದವಿಲ್ಲದೆ, ಜಿಲ್ಲೆ ಹಾಗೂ ಸುತ್ತಮುತ್ತಲಿನ ಸುಮಾರು 1,000ಕ್ಕೂ ಹೆಚ್ಚು ಬ್ಯಾಂಕ್ ಉದ್ಯೋಗಿಗಳು ಈ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೊದಲನೇ ದಿನವಾದ ನವೆಂಬರ್ 27ರ ಶುಕ್ರವಾರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ನಗರದ ಕೃಷಿ ಕಾಲೇಜು ಮೈದಾನದಲ್ಲಿ ವಿವಿಧ ಬ್ಯಾಂಕ್ಗಳ ತಂಡಗಳ ನಡುವೆ ‘ಬ್ಯಾಂಕರ್ಸ್ ರಾಜ್ಯೋತ್ಸವ ಕ್ರಿಕೆಟ್ ಕಪ್ 2026’ ಪಂದ್ಯಾವಳಿ ಜರುಗಲಿದ್ದು, ಅದೇ ದಿನ ಕುವೆಂಪು ಸಭಾಂಗಣದಲ್ಲಿ ಬ್ಯಾಂಕ್ ಸದಸ್ಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಎರಡನೇ ದಿನವಾದ ನವೆಂಬರ್ 28ರ ಶನಿವಾರ ಸಂಜೆ 4:00 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ವರ್ಣರಂಜಿತ ಸಾಂಸ್ಕೃತಿಕ ವೈಭವ ಹಾಗೂ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಖ್ಯಾತ ಕ್ವಿಜ್ ಮಾಸ್ಟರ್ ಹಾಗೂ ಸಾಹಿತಿ ಡಾ. ನಾ. ಸೋಮೇಶ್ವರ ಅವರು ಮುಖ್ಯ ಅತಿಥಿಗಳಾಗಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನವೆಂಬರ್ 28ರ ಸಂಜೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಮುಕ್ತ ಪ್ರವೇಶವಿದ್ದು, ಕಾರ್ಯಕ್ರಮದ ನಂತರ ರಾತ್ರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ವೃತ್ತಿಯಲ್ಲಿರುವವರು ಮತ್ತು ನಿವೃತ್ತ ಬ್ಯಾಂಕರ್ಗಳೆಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದೇವೆ. ಬ್ಯಾಂಕ್ಗಳಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಮತ್ತು ನೌಕರರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ. ಕುವೆಂಪು ರಂಗಮಂದಿರದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ ಎಂದು ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ಅಧ್ಯಕ್ಷ ರಾಜೇಂದ್ರ ಪೈ ಮನವಿ ಮಾಡಿದರು.
